ಕಠ್ಮಂಡ್, ಮೇ 26 : ಇತ್ತೀಚೆಗಷ್ಟೇ ಭಾರತದ ಗಡಿ ಪ್ರದೇಶಗಳನ್ನು ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡುವ ಮೂಲಕ ಗಡಿ ವಿವಾದದ ಕಿಡಿ ಹೊತ್ತಿಸಿದ ನೇಪಾಳ ಈಗ ಚೀನಾಕ್ಕೆ ರಸ್ತೆ ನಿರ್ಮಾಣ ಮಾಡಲು ತೊಡಗಿದೆ. ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚೆ ನಡೆಸಿದ್ದಾರೆ.
2008ರಲ್ಲಿ ಮಂಜೂರಾಗಿದ್ದ ರಸ್ತೆ ನಿರ್ಮಾಣ ಯೋಜನೆ, ಪ್ರತಿಕೂಲ ಹವಾಮಾನ ಮತ್ತು ಪ್ರತಿಕೂಲ ಸನ್ನಿವೇಶ ಎದುರಾಗಿದ್ದರಿಂದ ಸ್ಥಗಿತಗೊಳಿಸಲಾಗಿತ್ತು. 2015 ರಲ್ಲಿ ಭಾರತ ಹಾಗೂ ಚೀನಾ ನಡುವಿನ ರಸ್ತೆ ಸಂಪರ್ಕಕ್ಕೆ ಕೊಂಡಿಯಾಗಲು ನಿರಾಕರಿಸಿದ್ದ ನೇಪಾಳ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಭಾರತಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ನೇಪಾಳ ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ 130 ಕಿ.ಮೀ ಉದ್ದದ ಡಾರ್ಚುಲಾ-ಟಿಂಕರ್ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಮರುಚಾಲನೆ ನೀಡಿದೆ. 2008 ರಲ್ಲಿ ಕೇವಲ 43 ಕಿ.ಮೀ ತನಕ ರಸ್ತೆ ನಿರ್ಮಿಸಿ ಸ್ಥಗಿತಗೊಂಡಿದ್ದ ಕಾಮಗಾರಿಯ ಕಾರ್ಯಚರಣೆ ಪ್ರಗತಿಯಲ್ಲಿದ್ದು, ಬಾಕಿ ಉಳಿದಿರುವ 87 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ಗುರಿಯನ್ನು ನೇಪಾಳ ಹಾಕಿಕೊಂಡಿದೆ.
ಘಾಟಿಯಾಬಾಘಾರ್ ಎಂಬಲ್ಲಿ ನೇಪಾಳದ ಆರ್ಮಿ ತನ್ನ ಬೇಸ್ ಕ್ಯಾಂಪ್ ಸ್ಥಾಪಿಸಿದ್ದು, ಚೀನಾದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ 12 ವರ್ಷಗಳ ಬಳಿಕ ರಸ್ತೆ ಕಾಮಗಾರಿಯನ್ನು ಪುನರಾರಂಭಿಸುವುದು ಅನಿವಾರ್ಯವಾಗಿದೆ ಎಂದು ನೇಪಾಳ ಪ್ರಧಾನಿ ಕೆಪಿ ಶರ್ಮ ಓಲಿ ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಉತ್ತರಾಖಂಡ್ ರಾಜ್ಯದ ದಾರ್ಚುಲಾದಿಂದ ಲಿಪುಲೇಖ್ ಪಾಸ್ ಗೆ ಸಂಪರ್ಕ ಕಲ್ಪಿಸುವ 80 ಕಿ. ಮೀ ದೂರದ ರಸ್ತೆಯನ್ನು ಮೇ 8, 2020ರಂದು ಉದ್ಘಾಟಿಸಿದ್ದರು. ಇದಕ್ಕೆ ಪ್ರತಿಯಾಗಿ ನೇಪಾಳ ನಿಂತಿದ್ದ ಕಾಮಗಾರಿಗೆ ಮರುಚಾಲನೆ ನೀಡಿ ಚೀನಾಕ್ಕೆ ಸಂಪರ್ಕ ಕಲ್ಪಿಸಲು ಸಮಾನಾಂತರವಾಗಿ ರಸ್ತೆ ನಿರ್ಮಾಣದಲ್ಲಿ ತೊಡಗಿದೆ.








