ಭಾರತ-ನೇಪಾಳ ಗಡಿ ಬಳಿ ಭಾರತೀಯರ ಮೇಲೆ ಗುಂಡು ಹಾರಿಸಿದ ನೇಪಾಳ ಪೊಲೀಸ್
ಕಿಶನ್ ಗಂಜ್, ಜುಲೈ20: ಬಿಹಾರದ ಕಿಶನ್ ಗಂಜ್ ನಲ್ಲಿ ಭಾರತ-ನೇಪಾಳ ಗಡಿ ಬಳಿ ಭಾನುವಾರ ಮೂವರು ಭಾರತೀಯರ ಮೇಲೆ ನೇಪಾಳ ಗಡಿ ಪೊಲೀಸ್ ಪಡೆಗಳು ಗುಂಡು ಹಾರಿಸಿದ್ದು, ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಕಿಶನ್ ಗಂಜ್ ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಸರ್ಲಾಹಿ ಜಿಲ್ಲೆಯ ಇಂಡೋ-ನೇಪಾಳ ಗಡಿಯಿಂದ ನೇಪಾಳದ ಭೂಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಗುಂಡು ಹಾರಿಸಿದ್ದು, ಭಾರತೀಯರೊಬ್ಬರು ಸಾವನ್ನಪ್ಪಿದರು ಮತ್ತು ಇನ್ನಿಬ್ಬರು ಗಾಯಗೊಂಡರು.

ಮೇ 8 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಾಖಂಡದ ಲಿಪುಲೆಖ್ ಪಾಸ್ ಅನ್ನು ಚೀನಾದಲ್ಲಿ ಕೈಲಾಶ್ ಮಾನಸರೋವರ್ ಮಾರ್ಗದೊಂದಿಗೆ ಸಂಪರ್ಕಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದರು. ಇದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದಾಗಿನಿಂದ ಭಾರತ ಮತ್ತು ನೇಪಾಳದ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಭೂಪ್ರದೇಶದ ಭಾಗಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ನೇಪಾಳ ರಚಿಸಿದ ನಂತರ ಮೇ ತಿಂಗಳಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಭಾರತದೊಂದಿಗಿನ ಗಡಿ ವಿವಾದದ ಮಧ್ಯೆ ತನ್ನ ಪ್ರದೇಶದ ಅಡಿಯಲ್ಲಿರುವ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಲಾಪಾನಿಯನ್ನು ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳ ಕ್ಯಾಬಿನೆಟ್ ಅನುಮೋದಿಸಿತ್ತು.
ಲಿಪುಲೆಖ್ ಪಾಸ್ ನೇಪಾಳ ಮತ್ತು ಭಾರತದ ನಡುವಿನ ವಿವಾದಿತ ಗಡಿ ಪ್ರದೇಶವಾಗಿದ್ದು ಕಲಾಪಾನಿ ವಿವಾದದ ಕೇಂದ್ರ ಬಿಂದುವಾಗಿದೆ. ಭಾರತ ಮತ್ತು ನೇಪಾಳ ಎರಡೂ ಕಲಾಪಾನಿಯನ್ನು ತಮ್ಮ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಹೇಳಿಕೊಳ್ಳುತ್ತಿದೆ.








