ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ಆಸ್ಪತ್ರೆಗೆ ದಾಖಲು
ಕಠ್ಮಂಡು, ಜುಲೈ 2: ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಠ್ಮಂಡುವಿನಲ್ಲಿರುವ ಸಾಹಿದ್ ಗಂಗಲಾಲ್ ರಾಷ್ಟ್ರೀಯ ಹೃದಯ ಕೇಂದ್ರದಲ್ಲಿ ದಾಖಲು ಮಾಡಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಓಲಿ ಸಲಹೆಗಾರರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಓಲಿ ಸರ್ಕಾರ ಸಚಿವ ಸಂಪುಟ ಸಭೆ ಕರೆದಿತ್ತು ಮತ್ತು ಆ ಸಮಯದಲ್ಲಿ ನೇಪಾಳ್ ಕಮ್ಯುನಿಟಿ ಪಾರ್ಟಿ ಓಲಿ ರಾಜೀನೇಮೆಗೆ ಒತ್ತಾಯ ಹೇರಿದ್ದರು. ಅಷ್ಟೇ ಅಲ್ಲ ಬಾಲುವಾಟರ್ನಲ್ಲಿರೋ ಪ್ರಧಾನಿ ಓಲಿ ನಿವಾಸದಲ್ಲಿ ಕೂಡ ಆಡಳಿತ ಪಕ್ಷದ ಸ್ಥಾಯಿ ಸಮಿತಿ ಸಭೆ ನಡೆದಿತ್ತು. ಈ ಸಮಯದಲ್ಲಿ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಮಾರ್ಚ್ ಅಂತ್ಯದಲ್ಲಿ ಕೂಡ ಎದೆ ನೋವಿನ ಹಿನ್ನಲೆಯಲ್ಲಿ ಓಲಿ ಅವರನ್ನು ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ವರ್ಷದ ಮಾರ್ಚ್ ನಲ್ಲಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರು ಮೂತ್ರಪಿಂಡದ ವೈಫಲ್ಯತೆಯ ಹಿನ್ನಲೆಯಲ್ಲಿ ಮರು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಓಲಿ ಅವರ ಸೋದರ ಸೊಸೆ, 32 ವರ್ಷದ ಸಮ್ಯಕ್ಷ ಸಂಗ್ರೌಲಾ, ತನ್ನ ಬಲ ಮೂತ್ರಪಿಂಡವನ್ನು ಆಗ ಪ್ರಧಾನಿಗೆ ನೀಡಿದ್ದರು.
ವೈದ್ಯ ಡಾ. ದಿಬ್ಯಾ ಸಿಂಗ್ ಅವರು ಓಲಿ ಅವರನ್ನು
ಕಾರ್ಡಿಯೋಥೊರಾಸಿಕ್ ನಾಳೀಯ ಮತ್ತು ಕಸಿ ಕೇಂದ್ರದಲ್ಲಿ ವೀಕ್ಷಣೆಗೆ ಒಳಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಓಲಿ ಸಲಹೆಗಾರರು ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದು, ಚಿಂತೆ ಮಾಡಲು ಏನೂ ಇಲ್ಲ ಎಂದು ಹೇಳಿದ್ದಾರೆ.








