ಚಿಕ್ಕಮಗಳೂರು: ಕೊರೊನಾ ಹಿನ್ನಲೆಯಲ್ಲಿ ಹಲವು ತಿಂಗಳುಗಳಿಂದ ಶಾಲೆಗಳು ಪ್ರಾರಂಭವಾಗದೇ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಆದರೆ, ಮಲೆನಾಡಿನ ಹಲವು ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗ್ತಿಲ್ಲ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಪರದಾಟ ನಡೆಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಸಮೀಪದ ಕೋಗಿಲೆ ಗ್ರಾಮ. ಗ್ರಾಮದ ವಿದ್ಯಾರ್ಥಿಗಳು ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದ ಮರ ಏರಿ ಕುಳಿತು ಆನ್‍ಲೈನ್ ತರಗತಿಯಲ್ಲಿ ಭಾಗವಹಿಸುವಂತಾಗಿದೆ.
ಕೋಗಿಲೆ ಗ್ರಾಮದಲ್ಲಿ ಕೊಟ್ಟಿಗೆಹಾರ, ಬಣಕಲ್, ಮಂಗಳೂರು, ಮೂಡಿಗೆರೆ ಸೇರಿದಂತೆ ವಿವಿಧ ಶಾಲೆಗಳಿಗೆ ಹೋಗುವ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆನ್‍ಲೈನ್ ತರಗತಿ ಪ್ರಾರಂಭವಾಗುತ್ತಿದ್ದಂತೆ ನೆಟ್‍ವರ್ಕ್ ಸಿಗುವ ಕಡೆಗಳಲ್ಲಿ ಇರುವ ಮರಗಳನ್ನು ಏರಿ ಕುಳಿತು ಆನ್‍ಲೈನ್ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ನೆಟ್‍ವರ್ಕ್‍ಗಾಗಿ 5-6 ಕಿ.ಮಿ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ.
ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‍ಫೋನ್‍ಗಳಿಲ್ಲ. ಕೆಲ ವಿದ್ಯಾರ್ಥಿಗಳಿಗೆ ಪೋಷಕರು ಹಣ ಹೊಂದಿಸಿ ಸ್ಮಾರ್ಟ್‍ಫೋನ್ ತೆಗೆದುಕೊಟ್ಟಿದ್ದಾರೆ. ಬಣಕಲ್ ಹಾಗೂ ಬೆಟ್ಟಗೆರೆಯಲ್ಲಿ ಮೊಬೈಲ್ ಟವರ್ ಇದ್ದು ಕೋಗಿಲೆ ಗ್ರಾಮದ ಕೆಲವೆಡೆಗಳಲ್ಲಿ ಮಾತ್ರ ನೆಟ್‍ವರ್ಕ್ ಸಿಗುತ್ತದೆ. ಅರಣ್ಯದಂಚಿನ ಕುಗ್ರಾಮವಾಗಿರುವ ಕೋಗಿಲೆ ಗ್ರಾಮದಲ್ಲಿ ಕಾಡಾನೆ ಕಾಟವೂ ಹೆಚ್ಚಿದೆ. ನೆಟ್‍ವರ್ಕ್ ಸಮಸ್ಯೆಯ ನಡುವೆಯೂ ಪೋಷಕರು ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಯಲ್ಲಿ ಭಾಗವಹಿಸಲು ಪಡಿಪಾಟಲು ಪಡುತ್ತಿದ್ದಾರೆ.
ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸಮರ್ಪಕವಾಗಿ ಆನ್‍ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಮ್ಮ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದೆ. ಸಂಬಂಧಪಟ್ಟವರು ನೆಟ್‍ವರ್ಕ್ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎನ್ನುತ್ತಾರೆ ಮಕ್ಕಳು.
ನನಗೆ ಮನೆ ಇಲ್ಲ, ಗುಡಿಸಿಲಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳಿಗೆ ಮೊಬೈಲ್ ಕೊಡಿಸಲು ಕೂಡ ಸಾಧ್ಯವಾಗುತ್ತಿಲ್ಲ. ಕುಗ್ರಾಮದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಯಲ್ಲಿ ಭಾಗವಹಿಸಲು ಹಲವಾರು ತೊಡಕುಗಳಿವೆ ಎನ್ನುತ್ತಾರೆ ಪೋಷಕರು.
ಕೋಗಿಲೆಯಂತಹ ಕುಗ್ರಾಮದಲ್ಲಿ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೆಟ್‍ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಆನ್‍ಲೈನ್ ತರಗತಿಯಲ್ಲಿ ತೊಡಗಿಕೊಳ್ಳಲು ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಕೋಗಿಲೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.