ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚೌಲಗೆರೆ ಬಳಿ ಹೊಸ ಟೋಲ್ ಗೇಟ್ ಆರಂಭಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿದ್ದರೂ ಟೋಲ್ ಸಂಗ್ರಹ ಆರಂಭಿಸಿರುವುದು ಸರಿಯಲ್ಲ ಎಂದು ಸ್ಥಳೀಯರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಕಲೇಶಪುರದ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಬಾಕಿ ಉಳಿದಿದ್ದು, ಕಳಪೆ ಗುಣಮಟ್ಟದ ಕೆಲಸವಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಿಯಮದ ಪ್ರಕಾರ ಪ್ರತಿ 50-60 ಕಿ.ಮೀ.ಗೆ ಒಂದು ಟೋಲ್ ಗೇಟ್ ಇರಬೇಕು. ಆದರೆ, ಈಗಾಗಲೇ ಶಾಂತಿಗ್ರಾಮದಲ್ಲಿ ಒಂದು ಟೋಲ್ ಗೇಟ್ ಇರುವಾಗ ಚೌಲಗೆರೆ ಬಳಿ ಮತ್ತೊಂದು ಟೋಲ್ ಗೇಟ್ ಆರಂಭಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಬಗ್ಗೆ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.








