ಭಾರತೀಯ ಸೇನೆಗೆ ಹೊಸ ವಿನ್ಯಾಸದ ಸಮವಸ್ತ್ರ Saaksha Tv
ನವದೆಹಲಿ: ಭಾರತೀಯ ಸೇನಾ ದಿನವಾದ ನಿನ್ನೆ ಭಾರತೀಯ ಸೇನೆ ಯೋಧರಿಗೆ ವಿನೂತನ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ಪ್ಯಾರಾಚೂಟ್ ರೆಜಿಮೆಂಟ್‌ನ ಕಮಾಂಡೋ ತಂಡ ಹೊಸ ಸಮವಸ್ತ್ರಗಳನ್ನು ಧರಿಸಿ ಸೇನಾ ದಿನ ಪಥಸಂಚಲನ ಮಾಡಿದ್ದಾರೆ.
ಈ ಸಮವಸ್ತ್ರವು ಆಲೀವ್ ಮತ್ತು ಮಣ್ಣಿನ ಬಣ್ಣಗಳ ಮಿಶ್ರಣವಾಗಿದೆ. ಇದು ಯೋಧರಿಗೆ ಹಿತಕರವಾದ, ಹವಾಮಾನ ಸ್ನೇಹಿ ಮತ್ತು ಡಿಜಿಟಲ್ ಡಿಸ್ರಪ್ಟಿವ್ ಮಾದರಿಯ ವೈಶಿಷ್ಟ್ಯವನ್ನು ಒಳಗೊಂಡಿದೆ.
ಸೇನಾ ಪಡೆಗಳು ಕಾರ್ಯ ನಿರ್ವಹಣೆ ಮಾಡುವ ವಾತಾವರಣ ಪರಿಸ್ಥಿತಿಗಳಂತಹ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡು ವಿನ್ಯಾಸ ಮಾಡಲಾಗಿದೆ.
ಇದನ್ನು ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲ ಮಾದರಿಯ ಪ್ರದೇಶಗಳಲ್ಲಿಯೂ ಇದನ್ನು ಧರಿಸಬಹುದಾಗಿದ್ದು, ಮೊದಲಿನ ಸಮವಸ್ತ್ರಕ್ಕಿಂತ ಇದು ಹೆಚ್ಚು ಆರಾಮದಾಯಕವಾಗಿದೆ. ಕಂಪ್ಯೂಟರ್ ನೆರವಿನಿಂದ ಅದರ ಡಿಜಿಟಲ್ ಡಿಸ್ರಪ್ಟಿವ್ ಮಾದರಿಯನ್ನು ವಿನ್ಯಾಸ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸಮವಸ್ತ್ರದಲ್ಲಿ ಅಂಗಿಯನ್ನು ಪ್ಯಾಂಟ್ ಒಳಗೆ ಸೇರಿಸುವ ಅಗತ್ಯವಿಲ್ಲ. ಹಳೆಯ ಸಮವಸ್ತ್ರದಲ್ಲಿ ಅಂಗಿಯನ್ನು ಒಳಗೆ (ಇನ್ ಶರ್ಟ್) ಸೇರಿಸಬೇಕಾಗುತ್ತಿತ್ತು. ಸೇನೆಯ ಸಮವಸ್ತ್ರದ ತರಹದ ಉಡುಪುಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಈ ಹೊಸ ಸಮವಸ್ತ್ರದ ಮಾದರಿಯು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ.








