ಹೊಸ ವಂದೇ ಭಾರತ್ ರೈಲಿನ ದಾಖಲೆ – 52 ಸೆಕೆಂಡ್ ಗಳಲ್ಲಿ 0 -100 KM ವೇಗ ಹೆಚ್ಚಳ..
ದೇಶದ ಮೊದಲ ಸೆಮಿ-ಹೈ ಸ್ಪೀಡ್ ಮತ್ತು ಹೊಸ ವಂದೇ ಭಾರತ್ ರೈಲು ಪರೀಕ್ಷಾರ್ಥ ಚಾಲನೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕೆವಲ 52 ಸೆಕೆಂಡುಗಳಲ್ಲಿ ರೈಲು 0 ರಿಂದ 100 ಕಿಮೀ ವೇಗವನ್ನ ಹೆಚ್ಚಿಸಿಕೊಂಡಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಇದು ದೇಶದ ಮೂರನೇ ವಂದೇ ಭಾರತ್ ರೈಲಾಗಿದ್ದು ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಓಡಲಿದೆ.
ವಂದೇ ಭಾರತ್ ರೈಲಿನ ಮೂರನೇ ಪರೀಕ್ಷೆ ಗುರುವಾರ ನಡೆದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದು 0 ರಿಂದ 100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ಹೆಚ್ಚಿಸಿಕೊಂಡಿದೆ. ಆದರೆ ಬುಲೆಟ್ ರೈಲು ಈ ವೇಗವನ್ನ ಸಾಧಿಸಲು 54.6 ಸೆಕೆಂಡುಗಳನ್ನು ತೆಗೆದುಕೊಂಡಿತು. ಹೊಸ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ ಆಗಿದ್ದರೆ, ಹಳೆಯ ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ.
ಶುಕ್ರವಾರ ಅಹಮದಾಬಾದ್- ಮುಂಬೈ ನಡುವೆ ಹೊಸ ವಂದೇ ಭಾರತ್ ರೈಲು ಪರಿಕ್ಷಾರ್ಥ ಪ್ರಯಾಣ ನಡೆಸಿದೆ. ಈ ರೈಲು ಅಹಮದಾಬಾದ್‌ನಿಂದ ಸೂರತ್‌ಗೆ ಕೇವಲ 2 ಗಂಟೆ 32 ನಿಮಿಷಗಳಲ್ಲಿ ತಲುಪುತ್ತದೆ ಬೆಳಗ್ಗೆ 7.06ಕ್ಕೆ ಅಹಮದಾಬಾದ್‌ನಿಂದ ಹೊರಟ ರೈಲು 9.38ಕ್ಕೆ ಸೂರತ್ ನಿಲ್ದಾಣವನ್ನ ತಲುಪಿದೆ. ಇಲ್ಲಿಂದ ಮುಂಬೈ ಸೆಂಟ್ರಲ್ 12.16ಕ್ಕೆ ತಲುಪಿತು. ರೈಲು ಅಹಮದಾಬಾದ್‌ನಿಂದ ಮುಂಬೈಗೆ 492 ಕಿಮೀ ಕ್ರಮಿಸಲು ಕೇವಲ 5 ಗಂಟೆ 10 ನಿಮಿಷಗಳನ್ನ ತೆಗೆದುಕೊಂಡಿದೆ. ಆದರೆ ಶತಾಬ್ದಿ ಎಕ್ಸ್‌ಪ್ರೆಸ್ ಅಹಮದಾಬಾದ್‌ನಿಂದ ಮುಂಬೈ ಸೆಂಟ್ರಲ್ ತಲುಪಲು 6 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸವು ಫೋಟೋಕ್ಯಾಟಲಿಟಿಕ್ ಏರ್ ಪ್ಯೂರಿಫೈಯರ್ ವ್ಯವಸ್ಥೆಯನ್ನು ಹೊಂದಿದ್ದು, ಇದು 99% ಸೂಕ್ಷ್ಮಾಣುಗಳು ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.
ವಂದೇ ಭಾರತ್ ರೈಲು ವಿಮಾನದ ಫೀಚರ್ಸ್ ಗಳನ್ನ ಹೊಂದಿದೆ. ಎಸಿ, ಟಿವಿ, ಸ್ವಯಂಚಾಲಿತ ಬಾಗಿಲುಗಳು, ಹೈಕ್ಲಾಸ್ ಪ್ಯಾಂಟ್ರಿ ಮತ್ತು ವಾಶ್‌ರೂಮ್ ಎಲ್ಲವೂ ಈ ರೈಲಿನಲ್ಲಿದೆ. ವಂದೇ ಭಾರತ್ ರೈಲನ್ನ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಿಸಲಾಗಿದೆ.








