ಮಗಳೊಂದಿಗೆ ಕುಣಿದು ಕುಪ್ಪಳಿಸಿ ಕೊರೊನಾ ಸವಾಲು ಗೆದ್ದ ಸಂಭ್ರಮ ಆಚರಿಸಿದ ನ್ಯೂಜಿಲೆಂಡ್ ಪ್ರಧಾನಿ
ವೆಲ್ಲಿಂಗ್ಟನ್, ಜೂನ್ 10: ನ್ಯೂಜಿಲೆಂಡ್ ಈಗ ಕೊರೊನಾ ಮುಕ್ತವಾಗಿದೆ. ಫೆಬ್ರವರಿ 28 ರಂದು ನ್ಯೂಜಿಲೆಂಡ್ ನಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು. ನಂತರ ದೇಶದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಕೊರೊನಾ ಸೋಂಕಿನ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಕಳೆದ 17 ದಿನಗಳಿಂದ ನ್ಯೂಜಿಲೆಂಡ್ ನಲ್ಲಿ ಎಲ್ಲಿಯೂ ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲ. ದೇಶದಲ್ಲಿ ಸೋಂಕಿಗೆ ಒಳಗಾಗಿದ್ದ ಕೊನೆಯ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಆರೋಗ್ಯ ಅಧಿಕಾರಿಗಳು ವಿಷಯ ತಿಳಿಸುತ್ತಿದ್ದಂತೆ ನಾನು ನನ್ನ ಪುಟ್ಟ ಮಗಳು ನೇವ್ ಜೊತೆ ಕುಣಿದು ಕುಪ್ಪಳಿಸಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ನಾವು ಸಂಪೂರ್ಣವಾಗಿ ನಿಯಂತ್ರಿಸಿದ್ದು, ಕೊರೊನಾ ವೈರಸ್ ನ ವಿರುದ್ಧದ ಯುದ್ಧದಲ್ಲಿ ದೇಶದ ಜನತೆ ತೋರಿದ ಅಭೂತಪೂರ್ವ ಒಗ್ಗಟ್ಟಿಗೆ ಧನ್ಯವಾದ ಸಮರ್ಪಿಸಿದರು. ಇದು ಒಂದು ಮೈಲಿಗಲ್ಲು, ನಾವು ಸಾಧಿಸಿದ್ದೇವೆ. ಧನ್ಯವಾದ, ನ್ಯೂಜಿಲೆಂಡ್ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.
ದೇಶ ಕೊರೊನಾ ಮುಕ್ತವಾಗಿರುವುದರಿಂದ ಗಡಿಯಲ್ಲಿನ ನಿರ್ಬಂಧಗಳನ್ನು ಹೊರತು ಪಡಿಸಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನರು ಗುಂಪು ಸೇರದಿರುವುದು ಇತ್ಯಾದಿ ನಿರ್ಬಂಧಗಳು ನ್ಯೂಜಿಲೆಂಡ್ ನಲ್ಲಿ ಇನ್ನು ಇರುವುದಿಲ್ಲ ಎಂದರು.
ದೇಶ ಕೊರೊನಾ ಮುಕ್ತವಾಗಿದೆ ಎಂದು ಘೋಷಣೆಯಾಗುತ್ತಿದ್ದಂತೆ ದೇಶದಾದ್ಯಂತ ಜನರು ಸಂತೋಷದಿಂದ ಸಂಭ್ರಮಾಚರಣೆಯಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಇನ್ನು ಮುಂದೆ ದೇಶದ ಅರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಗಮನ ಹರಿಸಲಿದ್ದೇವೆ ಎಂದು ಹೇಳಿದರು. 50 ಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲೆಂಡ್ ನಲ್ಲಿ 1,500 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, 22 ಮಂದಿ ಕೊರೊನಾಗೆ ಬಲಿಯಾಗಿದ್ದರು.
ವಿಶ್ವದ ಬಲಿಷ್ಟ ರಾಷ್ಟ್ರಗಳು ಕೊರೊನಾ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗದೇ ಕಂಗೆಟ್ಟಿರುವಾಗ ನ್ಯೂಜಿಲೆಂಡ್ ಸೇರಿದಂತೆ ಮಾಂಟೆನೆಗ್ರೊ, ಎರಿಟ್ರಿಯಾ, ಪಪುವಾ ನ್ಯೂ ಗಿನಿಯಾ, ಸೀಶೆಲ್ಸ್, ಹೋಲಿ ಸೀ, ಸೇಂಟ್ ಕಿಟ್ಸ್ ಆ್ಯಂಡ್ ನೆವೀಸ್, ಫಿಜಿ, ಪೂರ್ವ ಟಿಮೋರ್ ಎಂಬ ಪುಟ್ಟ ರಾಷ್ಟ್ರಗಳು ಕೊರೊನಾ ಸವಾಲನ್ನು ಯಶಸ್ವಿಯಾಗಿ ಗೆದ್ದಿವೆ.