ಇಂಗ್ಲೆಂಡ್ ಗೆ ತವರಿನಲ್ಲೇ ಮುಖಭಂಗ.. ಸರಣಿ ಗೆದ್ದ ನ್ಯೂಜಿಲೆಂಡ್
ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ತವರಿನಲ್ಲೇ ಮುಖಭಂಗವಾಗಿದೆ. ನ್ಯೂಜಿಲೆಂಡ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಎಂಟು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರ ಸ್ಥಾನಕ್ಕೇರಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಅಗ್ರ ಸ್ಥಾನದಲ್ಲಿತ್ತು. ಆದ್ರೆ ಈಗ ಟೀಮ್ ಇಂಡಿಯಾ 121 ಅಂಕಗಳನ್ನು ಪಡೆದುಕೊಂಡಿದ್ರೆ, ನ್ಯೂಜಿಲೆಂಡ್ 123 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ.
ಗೆಲ್ಲಲು ಕೇವಲ 38 ರನ್ ಗಳ ಸವಾಲನ್ನು ಪಡೆದ ನ್ಯೂಜಿಲೆಂಡ್ ತಂಡ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 303 ರನ್ ದಾಖಲಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡ 388 ರನ್ ದಾಖಲಿಸಿ 85 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
ಆದ್ರೆ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ನಾಟಕೀಯವಾಗಿ ಕುಸಿತಕಂಡಿತ್ತು. ನ್ಯೂಜಿಲೆಂಡ್ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಕೇವಲ 122 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಹೀಗಾಗಿ ನ್ಯೂಜಿಲೆಂಡ್ ಗೆ ಗೆಲ್ಲಲು ಕೇವಲ 38 ರನ್ ಗಳ ಅವಶ್ಯಕತೆ ಮಾತ್ರ ಇತ್ತು.
ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ನ್ಯೂಜಿಲೆಂಡ್ ನ ಮ್ಯಾಟ್ ಹೆನ್ರಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಹಾಗೇ ನ್ಯೂಜಿಲೆಂಡ್ ನ ಡೆವೊನ್ ಕಾನ್ವೊ ಮತ್ತು ಇಂಗ್ಲೆಂಡ್ ನ ರೋರಿ ಬನ್ರ್ಸ್ ಅವರು ಜಂಟಿಯಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.
ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ಜೂನ್ 18ರಿಂದ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಎಚ್ಚರಿಕೆಯನ್ನು ನೀಡಿದೆ.








