ಔಟಾದ ಸಿಟ್ಟು… ಕೈಗೆ ಏಟು ಮಾಡಿಕೊಂಡ ನ್ಯೂಜಿಲೆಂಡ್ ನ ವಿಕೆಟ್ ಕೀಪರ್ ಡೆವೊನ್ ಕಾನ್ವೆ
ಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಹೋರಾಟ ನಡೆಸಲಿವೆ.
ಆದ್ರೆ ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ಡ್ರೆಸಿಂಗ್ ರೂಮ್ ನಿಂದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಹೌದು, ನ್ಯೂಜಿಲೆಂಡ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಡೆವೊನ್ ಕಾನ್ವೆ ಅವರು ಕೈ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೆ ಭಾರತ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ.
ಔಟಾದ ಸಿಟ್ಟಿನಲ್ಲಿ ಡೆವೊನ್ ಕಾನ್ವೆ ಅವರು ಬ್ಯಾಟ್ ಗೆ ರಭಸವಾಗಿ ಕೈಯಿಂದ ಗುದ್ದಿದ್ದರು. ಕೈಯಲ್ಲಿ ಗ್ಲೌಸ್ ಇದ್ರೂ ಕೂಡ ಕಾನ್ವೆ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಅವರು ಆಡುವ ಸ್ಥಿತಿಯಲ್ಲಿ ಇಲ್ಲ. ಕಾನ್ವೆ ಅವರು ತಂಡದ ಪ್ರಮುಖ ಆಟಗಾರನಾಗಿದ್ದಾರೆ. 11ರ ಬಳಗದಿಂದ ಹೊರಗುಳಿದಿರುವುದರಿಂದ ಕಾನ್ವೆ ಅವರು ನಿರಾಸೆ ಅನುಭವಿಸಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ಹೆಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನ ವಿರುದ್ಧ ಸೂಪರ್ 12ರ ಲೀಗ್ ಪಂದ್ಯದ ವೇಳೆ ಲೂಕಿ ಫಗ್ರ್ಯುಸನ್ ಅವರು ಕೂಡ ಸ್ನಾಯು ಸೆಳೆತದಿಂದಾಗಿ ಹೊರಗುಳಿದಿದ್ದರು.
ಒಟ್ಟಿನಲ್ಲಿ ಸೈಲೆಂಟ್ ಕಿಲ್ಲರ್ಸ್ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಕಾದಾಟದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ನ್ಯೂಜಿಲೆಂಡ್ ತಂಡ 2015 ಮತ್ತು 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆದ್ರೆ 2021ರಲ್ಲಿ ನಡೆದ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಒಂದೇ ವರ್ಷದಲ್ಲಿ ಎರಡು ಐಸಿಸಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ ನ್ಯೂಜಿಲೆಂಡ್ ತಂಡ.