ನರ್ಸ್ ವೇಷದಲ್ಲಿ ಮಗುವಿನ ಅಪಹರಣ – ಒಂದೇ ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು..
ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಮಗುವಿನ ಆರೋಗ್ಯ ತಪಾಸಣೆ ನಡೆಸುವ ನೆಪದಲ್ಲಿ ಮಗುವನ್ನ ಅಪಹರಿಸಿಕೊಂಡು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನ ಭೇದಿಸಿ ಮಗುವನ್ನ ರಕ್ಷಿಸಿದ್ದಾರೆ.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ ಈ ಅಪರಾಧ ನಡೆದಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ನರ್ಸ್ ವೇಷ ಧರಿಸಿ ಮಹಿಳೆಯೊಬ್ಬರು ನವಜಾತ ಶಿಶುವಿನ “ಕಾಮಾಲೆ ಮಟ್ಟವನ್ನು” ಪರೀಕ್ಷಿಸಲು ಕೇಳಿದಾಗ, ತಾಯಿ ಪಿ ಅಶ್ವತಿ ತಕ್ಷಣವೇ ಮಗುವನ್ನು ಅವಳಿಗೆ ಒಪ್ಪಿಸಿದ್ದಾರೆ. 30 ನಿಮಿಷಗಳ ನಂತರ ಮಗುವನ್ನು ಹಿಂತಿರುಗಿಸದಿದ್ದಾಗ, ಅವಳು ನರ್ಸಿಂಗ್ ಸ್ಟೇಷನ್‌ಗೆ ಹೋದಾಗ ತನ್ನ ಮಗುವನ್ನು ಅಪಹರಿಸಲಾಗಿದೆ ಎಂದು ಕಂಡುಬಂದಿದೆ. ಕೂಡಲೇ ಪೊಲೀಸರು ಅಲರ್ಟ್ ಆಗಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಮಹಿಳೆಯೊಬ್ಬರು ಆಸ್ಪತ್ರೆಯಿಂದ ತರಾತುರಿಯಲ್ಲಿ ತೆರಳುತ್ತಿರುವುದನ್ನು ಕಂಡೆ ಎಂದು ಆಟೋರಿಕ್ಷಾ ಚಾಲಕನೊಬ್ಬ ಹೇಳಿಕೆ ನೀಡಿದ್ದಾನೆ. ಸಂಜೆ 5 ಗಂಟೆಯ ವೇಳೆಗೆ ನಗರದ ಹೋಟೆಲ್‌ನಿಂದ ಅಪಹರಣಕಾರ ನೀತು ರಾಜ್ ಮತ್ತು ಮಗುವನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಿ ಶಿಪ್ಲಾ ತಿಳಿಸಿದ್ದಾರೆ
ದಾಖಲೆ ಸಮಯದಲ್ಲಿ ಅಪಹರಣ ಘಟನೆಯನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳಿಗೆ ಬಹುಮಾನ ನೀಡಲಾಗುವುದು ಎಂದು ಎಸ್ ಪಿ ಅವರು ಹೇಳಿದರು. ಸಂಜೆ 5.30ಕ್ಕೆ ಸಬ್ ಇನ್ಸ್‌ಪೆಕ್ಟರ್ ಟಿ ಎಸ್ ರೆನೀಷ್ ಅವರು ಮಗುವಿನೊಂದಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಬಂದಾಗ ಎಲ್ಲರೂ ಪೊಲೀಸ್ ತಂಡಕ್ಕೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
“ತನ್ನ ಪ್ರೇಮಿ ಇಬ್ರಾಹಿಂ ಬಾದುಷಾಗೆ ಬ್ಲ್ಯಾಕ್‌ಮೇಲ್ ಮಾಡಲು ಮಗುವನ್ನು ಅಪಹರಿಸಿರುವುದಾಗಿ ಆರೋಪಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಮಹಿಳೆ ಮತ್ತು ಇಬ್ರಾಹಿಂ ಬಾದುಷಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ರಾಹಿಂ ಬಾದುಷಾ ಬೇರೆ ಮದುವೆಯಾಗಲು ತಯಾರಿ ನಡೆಸಿದಾಗ ಬಾದುಷಾಗೆ ಹುಟ್ಟಿದ ಮಗು ಎಂದು ಬ್ಲಾಕ್ ಮೇಲ್ ಮಾಡಲು ಮಹಿಳೆ ಈ ಕೃತ್ಯ ಎಸೆಗಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.








