ಹಾಲಿ ಸಚಿವರು ನಾಮಕಾವಸ್ತೆಗೆ ಮಾತ್ರ ಸಚಿವರಾಗಬಾರದು : ರೇಣುಕಾಚಾರ್ಯ
ಬೆಂಗಳೂರು: ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಸಚಿವ ಆಕಾಂಕ್ಷಿಗಳು ಬಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ.
ಏಪ್ರಿಲ್ 30ರಂದು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದು, ಸಂಪುಟ ಪುನರ್ ರಚನೆ ಬಗ್ಗೆ ಹೈ ಕಮಾಂಡ ನಾಯಕರ ಜೊತೆ ಮಾತುಕತೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಮುಂಚೆಯೇ ಶಾಸಕ ಎಂ. ಪಿ. ರೇಣುಕಾಚಾರ್ಯ ಮಾತನಾಡಿ ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಅವುಗಳನ್ನು ಬೇರೆಯವರು ಹೆಚ್ಚುವರಿಯಾಗಿ ನಿರ್ವಹಣೆ ಮಾಡುತ್ತಾರೆ. ಅವರ ಬದಲು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಇದರಿಂದ ಅಗ್ರೆಸ್ಸಿವ್ ಆಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆ ಇಷ್ಟೊಂದು ವಿಳಂಬ ಮಾಡಬಾರದಿತ್ತು. ಚುನಾವಣೆಗೆ ಇನ್ನು 8-9 ತಿಂಗಳು ಮಾತ್ರ ಬಾಕಿ ಇದೆ. ಚುನಾವಣೆ ದೃಷ್ಟಿಯಿಂದ ಸಂಪುಟ ವಿಸ್ತರಣೆ ಆಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಹಾಲಿ ಸಚಿವರ ವಿರುದ್ಧ ಮತ್ತೆ ಸಿಡಿದೆದ್ದ ರೇಣುಕಾಚಾರ್ಯ, ಬರೀ ನಾಮಕಾವಸ್ತೆಗೆ ಮಾತ್ರ ಸಚಿವರಾಗಬಾರದು. ಜಿಲ್ಲಾ ಮಂತ್ರಿ ಆದಮೇಲೆ ಜಿಲ್ಲೆಯ ಸಮಸ್ಯೆ ಸರಿಪಡಿಸಬೇಕು. ತಾಲೂಕು ಜಿಲ್ಲೆಯಲ್ಲಿ ಓಡಾಡಿ ಪಕ್ಷ ಸಂಘಟನೆ ಸರ್ಕಾರದ ವರ್ಚಸ್ಸು ಹೆಚ್ಚು ಮಾಡಬೇಕು. ಕೇವಲ ಜಿಲ್ಲಾ ಮಟ್ಟ, ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು. ನಾನು ಹಿಂದೆ ಅಬಕಾರಿ ಮಿನಿಸ್ಟರ್ ಆದಾಗ ಜಿಲ್ಲೆಯಾದ್ಯಂತ ಓಡಾಟ ಮಾಡಿದ್ದೆ. ಈಗಿರುವ ಸಚಿವರು ಅಗ್ರೆಸ್ಸಿವ್ ಆಗಬೇಕು. ಆದರೆ ಅವರ ಕಾರ್ಯವೈಖರಿ ಬಗ್ಗೆ ನನಗಂತೂ ಸಮಾಧಾನ ಇಲ್ಲ ಎಂದರು.
ಅಗ್ರೆಸ್ಸಿವ್ ಆಗಿ, ಸ್ಪೀಡಾಗಿ ಹೋದಾಗ ಮಾತ್ರ ಚುನಾವಣೆ ಗೆಲ್ಲಬಹುದು. ಪ್ರತಿಪಕ್ಷ ಗಳ ಆರೋಪಕ್ಕೆ ಸಚಿವರು ಸರಿಯಾದ ಉತ್ತರ ಕೊಡುತ್ತಿಲ್ಲ. ಬರೀ ಮುಖ್ಯಮಂತ್ರಿ ಗೆ ಮಾತ್ರ ಅಲ್ಲ, ಇದರಲ್ಲಿ ಎಲ್ಲರ ಕರ್ತವ್ಯ ಕೂಡ ಇದೆ. ಸಚಿವರಿಗೆ ಕೇವಲ ಕುರ್ಚಿ ಸ್ವಾರ್ಥ ಮಾತ್ರ ಮುಖ್ಯನಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.