ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಹೃದಯವಿದ್ರಾವಕ ದುರ್ಘಟನೆಯೊಂದು ನಡೆದಿದೆ. ಇಂದು (ಭಾನುವಾರ) ಮುಂಜಾನೆ ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಪುನಲೂರು-ಮುವಾಟ್ಟುಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಹೊಸದಾಗಿ ವಿವಾಹವಾಗಿದ್ದ ಅನು ಮತ್ತು ನಿಲ್, ಮಲೇಷಿಯಾದಲ್ಲಿ ಹನಿಮೂನ್ ಪ್ರವಾಸ ಮುಗಿಸಿ ತಮ್ಮ ಮನೆಗೆ ವಾಪಸಾಗುವ ವೇಳೆ ದುರ್ಘಟನೆ ನಡೆದಿದೆ. ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ನಿಖಿಲ್ ಅವರ ತಂದೆ ಮತ್ತು ಅನು ಅವರ ತಂದೆಯೂ ಈ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ದಂಪತಿಗಳು ನವೆಂಬರ್ 30 ರಂದು ವಿವಾಹವಾಗಿದ್ದರು.
ಅವರು ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ.
ಪ್ರಾಥಮಿಕ ತನಿಖೆಯ ನಂತರ ಕಾರು ಚಲಾಯಿಸುತ್ತಿದ್ದ ಅನು ಅವರ ತಂದೆ ಬಿಜು ಪಿ ಜಾರ್ಜ್ ನಿದ್ರೆಗೆ ಜಾರಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮಾರುತಿ ಸ್ವಿಫ್ಟ್ ಕಾರು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಸಂಪೂರ್ಣ ಜಖಂಗೊಂಡಿತ್ತು. ಬಹಳ ಪ್ರಯತ್ನದ ನಂತರ ಕಾರನ್ನು ಕಟ್ ಮಾಡಿ ಒಳಗಿದ್ದವರನ್ನು ರಕ್ಷಿಸಲಾಯಿತು.
ಭಾರೀ ಶಬ್ದ ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಮೊದಲು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.