ಅಮಿತ್ ಶಾ ಮತ್ತೆ ಏಮ್ಸ್ ಗೆ ದಾಖಲು..!
ಪೋಸ್ಟ್ ಕೋವಿಡ್ ಚಿಕಿತ್ಸೆಯನ್ನು ಪಡೆದ ನಂತರ ಆಗಸ್ಟ್ 31 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಗೃಹ ಸಚಿವ ಅಮಿತ್ ಶಾ ಅವರನ್ನು ಮತ್ತೊಮ್ಮೆ ಏಮ್ಸ್ ಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿರುವ ಪರಿಣಾಮ ತಡರಾತ್ರಿ ಅಮಿತ್ ಷಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಜಮೀರ್ ವಿರುದ್ಧ ಕುಮಾರಸ್ವಾಮಿ ಶಂಕೆ..!
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ತನಿಖೆ ನಡೆಯುತ್ತಿರುವಾಗಲೇ ಶಾಸಕ ಜಮೀರ್ ಅಹಮದ್ ನನ್ನ ಹೆಸರನ್ನು ಎಳೆದು ತಂದಿದ್ದು ಯಾಕೆ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಡ್ರಗ್ಸ್ ಮಾಫಿಯಾ ಬಗ್ಗೆ ಸಮಗ್ರ ತನಿಖೆ ಆಗಲಿ. ಆದರೆ ತನಿಖೆಯ ದಾರಿ ತಪ್ಪಿಸಲು ಜಮೀರ್ ನನ್ನ ಹೆಸರು ಹೇಳಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ನೈಟ್ ಬಾರ್ ಗಳಲ್ಲಿ ಡ್ರಗ್ಸ್ ಬಳಕೆ ಇದೆ: ಹೆಚ್ ಡಿಕೆ
1982ರಲ್ಲೇ ನಾನು ಕ್ಯಾಸಿನೋ ಹೇಗಿರುತ್ತೆ ಎಂದು ನೋಡಿದ್ದೇನೆ. ಮಲೇಶಿಯಾಗೆ ಪತ್ನಿ ಜತೆ ಹೋಗಿದ್ದಾಗ ಕ್ಯಾಸಿನೋ ನೋಡಿದ್ದೇನೆ. ಬೆಂಗಳೂರಿನ ನೈಟ್ ಬಾರ್‍ಗಳಲ್ಲಿ ಈಗಲೂ ಡ್ರಗ್ಸ್ ದಂಧೆ ನಡೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ನೈಟ್ ಬಾರ್‍ಗಳು ರಂಗಾಗುತ್ತವೆ. ಎಂ.ಜಿ ರಸ್ತೆ ಹಾಗೂ ಮಲ್ಯ ರಸ್ತೆಗಳಲ್ಲಿ ಬೆಳಗಿನ ಜಾವದವರೆಗೂ ನೈಟ್ ಪಾರ್ಟಿಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನೈಟ್ ಬಾರ್‍ಗಳಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಪ್ರಯತ್ನ ಮಾಡಿದ್ದೆ ಆದರೆ, ಈಗ ಹೇಗಿದೆ ಎಂಬುದು ಗೊತ್ತಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಂಗನಾ ಕಾಲೆಳೆದ ಪ್ರಕಾಶ್ ರಾಜ್..!
ಒಂದು ಚಿತ್ರದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದರೆ, ದೀಪಿಕಾಳ ಪದ್ಮಾವತಿ, ಹೃತಿಕ್ ಅವರ ಅಕ್ಬರ್, ಶಾರೂಕ್ ಅವರ ಅಶೋಕ, ಅಜಯ್ ದೇವಗನ್ ಅವರ ಭಗತ್ ಸಿಂಗ್, ಆಮೀರ್ ಖಾನ್ ಅವರ ಮಂಗಲ ಪಾಂಡೆ ಮತ್ತು ವಿವೇಕ್ ಅವರ ಮೋದಿ ಜಿ… ಏನು? ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿ ಕಂಗನಾರ ಕಾಲೆಳೆದಿದ್ದಾರೆ.
ಜಮೀರ್ ಅಹಮದ್, ಸಂಬರಗಿಗೆ ಸಿಸಿಬಿ ನೊಟೀಸ್.?
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದ ಶೇಕ್ ಫಾಸಿಲ್ ಜತೆ ಸಂಪರ್ಕ ಹೊಂದಿದ್ದ ಫೋಟೋ ಹಾಘೂ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್‍ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಗಿಣಿ-ಸಂಜನಾ ಜೈಲು ಹಕ್ಕಿ ಆಗೋದು ಪಕ್ಕಾನಾ..?
ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಕೇಸಲ್ಲಿ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲಾನಿ ನಾಳೆ ಪರಪ್ಪನ ಅಗ್ರಹಾರ ಜೈಲು ಸೇರುವುದು ಪಕ್ಕಾನಾ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಳೆ ರಾಗಿಣಿ, ಸಂಜನಾರ ಸಿಸಿಬಿ ಪೊಲೀಸ್ ಕಸ್ಟಡಿ ಕೊನೆಗೊಳ್ಳಲಿದೆ. ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ಟು 11 ದಿನಗಳ ಕಾಲ ರಾಗಿಣಿಯನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಈಗಾಗಲೇ 10 ದಿನಗಳ ಕಸ್ಟಡಿ ಮುಗಿದು ಹೋಗಿದೆ. ನಾಳೆ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರಾಗಿಣಿಯನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಿ ಇನ್ನಷ್ಟು ದಿನ ವಿಚಾರಣೆಗೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಅಪಾರ್ಟ್‍ಮೆಂಟ್‍ಗಳೇ ಡ್ರಗ್ ಪಾರ್ಟಿ ಅಡ್ಡಾ..?
ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ನಂಟಿನ ಆರೋಪದ ಮೇಲೆ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾಗೆ ಹೈಲೆವೆಲ್ ಲಿಂಕ್ ಇರುವುದು ವಿಚಾರಣೆ ಬೆಳಕಿಗೆ ಬಂದಿದ್ದು, ಇಬ್ಬರನ್ನು ವಿಚಾರಣೆ ನಡೆಸದಂತೆ, ಬಂಧಿಸದಂತೆ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು ಒತ್ತಡ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ರಾಗಿಣಿ ಹಾಗೂ ಸಂಜನಾ ವಿಚಾರಣೆ ವೇಳೆ ತಾವು ಪ್ರತಿಷ್ಠಿತ ರಾಜಕಾರಣಿಗಳ ಜತೆ ಸಂಪರ್ಕ ಹೊಂದಿರುವುದು, ರಾಜಕಾರಣಿಗಳು ಹಾಗೂ ಅವರ ಮಕ್ಕಳು ಪಾಲ್ಗೊಳ್ಳುತ್ತಿದ್ದ ಪಾರ್ಟಿಗಳಲ್ಲಿ ತಾವು ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸಂಜನಾ ಪರ ಐಎಎಸ್ ಅಧಿಕಾರಿ ಒತ್ತಡ..!
ನಟಿ ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆಯದಂತೆ ಹಾಗೂ ಬಂಧಿಸದಂತೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ವಿಧಾನಸೌಧದಲ್ಲಿ ಕೆಲಸ ಮಾಡಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಂಜನಾಳನ್ನು ಬಂಧನ ಮಾಡಬಾರದು ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಂತೆ. ಆದರೆ, ಪ್ರಬಲ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಸಂಜನಾಳನ್ನು ಬಂಧಿಸಲಾಯಿತು. ಸಂಜನಾ ಬಂಧನದ ನಂತರವೂ ವಿಚಾರಣೆ ನೆಪದಲ್ಲಿ ಕಿರುಕುಳ ಕೊಡದಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.
DMK ಸಂಸದ ಜಗದರಕ್ಷಕನ್ ಆಸ್ತಿ ಜಪ್ತಿ..!
ವಿದೇಶಿ ವಿನಿಮಯ ನಿರ್ವಹಣ ಕಾಯ್ದೆ ಉಲ್ಲಂಘನೆ ಆರೋಪದಡಿ ಡಿಎಂಕೆ ಪಕ್ಷದ ಸಂಸದ ಎಸ್ ಜಗದರಕ್ಷಕನ್ ಮನೆ ಮೇಲೆ ರೇಡ್ ನಡೆಸಿದ್ದ ಇಡಿ ಅಧಿಕಾರಿಗಳು, ಜಗದರಕ್ಷಕನ್ ಹಾಗೂ ಸಂಬಂಧಿಕರ ಸುಮಾರು 89.19 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಡಿದ್ದಾರೆ. ಶನಿವಾರ ಮುಂಜಾನೆ ಮನೆ , ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೆ. 37ಎ ಅಡಿಯಲ್ಲಿ ಜಗದರಕ್ಷಕನ್ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದು, ಆಸ್ತಿ ವಶಪಡಿಸಿಕೊಂಡಿದ್ದಾರೆ.
ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ನಿಧನ
ಆರ್ ಜೆಡಿ ಮಾಜಿ ನಾಯಕ, ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರು ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ 75 ವರ್ಷ ವಯಸ್ಸಿನ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ದೆಹಲಿಯ ಏಮ್ಸ್ ನಲ್ಲಿ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಗಣಿನಾಡಿನಲ್ಲಿ ವರುಣಾರ್ಭಟ, ಜನರ ಪರದಾಟ ..!
ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ವರುಣ ಆರ್ಭಟ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಸಿರಗುಪ್ಪ ತಾಲೂಕಿನ ಗ್ರಾಮಗಳನ್ನು ನಡುಗಡ್ಡೆಯಾಗಿ ಮಾರ್ಪಾಡಾಗಿವೆ. ಅದ್ರಲ್ಲೂ ಹೆಚ್. ಹೊಸಳ್ಳಿ ಮತ್ತು ಹಾಗಲೂರು ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡು ದ್ವೀಪದಂತೆ ಕಾಣುತ್ತಿವೆ..
ಜಂಪಾ ಜಾದೂ ; ಆರ್ ಸಿ ಬಿ ಖುಷ್
ಯುಎಇನಲ್ಲಿ ಕಲರ್ ಫುಲ್ ಟೂರ್ನಿ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆರ್ ಸಿಬಿ ಸೇರಿದಂತೆ ಎಲ್ಲ ತಂಡಗಳು ಮೈದಾನಕ್ಕಿಳಿದು ತಾಲೀಮು ಆರಂಭಿಸಿವೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿವೆ. ಇದರ ಮಧ್ಯೆ ಆರ್ ಸಿಬಿ ತಂಡದ ಸ್ಪಿನ್ನರ್ ಆಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಜಾದೂ ಮಾಡಿದ್ದಾರೆ. 10ಓವರ್ ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್ ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ ತಂಡ ಗೆಲ್ಲಲಿದೆ
13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಐಪಿಎಲ್ ಟ್ರೋಫಿಯನ್ನು ಡೆಲ್ಲಿ ಕ್ಯಾಪಿಟಲ್ ತಂಡ ಗೆಲ್ಲಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕೆವಿನ್ ಪೀಟರ್ಸನ್, ಇಂಗ್ಲೆಂಡ್ ಬಬಲ್ ನಿಂದ ದುಬೈಗೆ … ನಾವು ಮತ್ತೆ ಕ್ರಿಕೆಟ್ ಗೆ ಮರಳಿರುವುದಕ್ಕೆ ಸಂತೋಷವಾಗುತ್ತಿದೆ. ಐಪಿಎಲ್ 2020ಯಲ್ಲಿ ಕೆಲಸ ಮಾಡುವುದಕ್ಕೆ ಅತ್ಯಂತ ಖುಷಿಪಡುತ್ತೇನೆ ಎಂದಿರುವ ಅವರು ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಾಗೆ ನನಗೆ ಡೆಲ್ಲಿ ಕ್ಯಾಪಿಟಲ್ ಗೆಲ್ಲುವ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.








