ಬೆಂಗಳೂರು: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಕೇವಲ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬ್ರೇಕ್‌ಫಾಸ್ಟ್ ಮತ್ತು ಡಿನ್ನರ್ ಮೀಟಿಂಗ್‌ಗಳನ್ನು ವ್ಯಂಗ್ಯಭರಿತವಾಗಿ ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಆಂತರಿಕ ರಾಜಕೀಯ ಮತ್ತು ಅಧಿಕಾರ ಉಳಿಸಿಕೊಳ್ಳುವ ಕಸರತ್ತುಗಳೇ ಹೆಚ್ಚಾಗಿವೆ. ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಎಂದು ಕಾಲಹರಣ ಮಾಡಿದರೆ ಜನರಿಗೆ ನೀವು ನೀಡುವ ಸಂದೇಶವಾದರೂ ಏನು? ಬೆಳಗ್ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ ಊಟ, ರಾತ್ರಿ ಡಿನ್ನರ್ ಮೀಟಿಂಗ್ ನಲ್ಲಿ ಬೆಳ್ಳುಳ್ಳಿ ಕಬಾಬ್ ಬರುತ್ತದೆ ಎಂದೇನಾದರೂ ಈ ಸಭೆಗಳನ್ನು ಮಾಡುತ್ತಿದ್ದೀರಾ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎನ್ನುವುದಾದರೆ ಅದನ್ನು ಆಡಳಿತದಲ್ಲಿ ತೋರಿಸಿ, ಅದನ್ನು ಬಿಟ್ಟು ಈ ರೀತಿ ಭೋಜನ ಕೂಟಗಳನ್ನು ನಡೆಸುವ ಅಗತ್ಯವೇನಿದೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಒಂದೆಡೆ ಸರ್ಕಾರಿ ನಾಯಕರು ಐಷಾರಾಮಿ ಊಟದ ಸಭೆಗಳಲ್ಲಿ ಮಗ್ನರಾಗಿದ್ದರೆ, ಇನ್ನೊಂದೆಡೆ ಬಡವರು ನರಳಾಡುತ್ತಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಹದಗೆಟ್ಟಿದೆ. ಗರ್ಭಿಣಿಯರು ಮತ್ತು ಮಕ್ಕಳು ಚಿಕಿತ್ಸೆ ಸಿಗದೆ ಬಲಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅತ್ತ ಶಿಕ್ಷಣ ಇಲಾಖೆಯೂ ಕಂಗೆಟ್ಟಿದ್ದು, ರಾಜ್ಯಾದ್ಯಂತ ಸುಮಾರು 7 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಶಿಕ್ಷಕರ ನೇಮಕಾತಿಯಾಗದೆ ಮಕ್ಕಳ ಶಿಕ್ಷಣಕ್ಕೆ ಆಪತ್ತು ಬಂದೊದಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ
ಬೆಂಗಳೂರು ನಗರದ ದುಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ರಾಜಧಾನಿಯ ರಸ್ತೆಗಳು ಮರಣಕೂಪಗಳಾಗಿವೆ. ರಸ್ತೆ ಯಾವುದು, ಫುಟ್‌ಪಾತ್ ಯಾವುದು ಎಂದು ತಿಳಿಯದಂತಾಗಿದೆ. ಕೇವಲ 15 ಸಾವಿರ ಗುಂಡಿಗಳನ್ನು ಮುಚ್ಚುವ ಯೋಗ್ಯತೆ ಈ ಸರ್ಕಾರಕ್ಕಿಲ್ಲವೇ? ಈಗಾಗಲೇ ಗುಂಡಿಗಳಿಗೆ ಬಿದ್ದು 500 ರಿಂದ 600 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.
ಬ್ರದರ್ಸ್ ನಾಟಕ ಅಭಿಯಾನ
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಬ್ರದರ್ಸ್ ಬಾಂಧವ್ಯದ ಬಗ್ಗೆಯೂ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು. ಕಾಂಗ್ರೆಸ್ ನಾಯಕರು ಯಾವಾಗ ಬ್ರದರ್ ಆಗುತ್ತಾರೋ, ಯಾವಾಗ ಅದು ಕ್ಯಾನ್ಸಲ್ ಆಗುತ್ತದೆಯೋ ಯಾರಿಗೂ ಗೊತ್ತಿಲ್ಲ. ಒಳಗೊಳಗೆ ಅಧಿಕಾರಕ್ಕಾಗಿ ಕಚ್ಚಾಾಟ ನಡೆಯುತ್ತಿದ್ದು, ಯಾರ ಪರ ಸಹಿ ಹಾಕಬೇಕು ಎಂದು ಎ, ಬಿ, ಸಿ ಟೀಮ್‌ಗಳು ರಚನೆಯಾಗಿವೆ. ಕಾಂಗ್ರೆಸ್ ಹೈಕಮಾಂಡ್ ಅಸ್ತಿತ್ವದಲ್ಲಿದ್ದರೆ ಈ ಗೊಂದಲಗಳನ್ನು ಸರಿಪಡಿಸಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಎಂ.ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಮೊದಲ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಯಿತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಜಿಬಿಎ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋರ್ ಕಮಿಟಿ ಪ್ರವಾಸ ಕೈಗೊಂಡು, ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಚುರುಕುಗೊಳಿಸಲು ಸೂಚನೆ ನೀಡಲಾಯಿತು.
ಸಭೆಯಲ್ಲಿ ಪ್ರಮುಖ ನಾಯಕರಾದ ಸಾ.ರಾ. ಮಹೇಶ್, ಎ. ಮಂಜು, ಹೆಚ್.ಕೆ. ಕುಮಾರಸ್ವಾಮಿ, ನೇಮಿರಾಜ್ ನಾಯ್ಕ್, ಕರೆಮ್ಮ ನಾಯಕ್, ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.








