ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿರುವ ಕುಶಾಲ ನಗರದ ಕುವೆಂಪು, ಸಾಯಿ ಬಡಾವಣೆ, ತೆಪ್ಪದಕಂಡಿ, ನಂಜರಾಯಪಟ್ಟಣ, ನೆಲ್ಯಹುದಿಕೇರಿ, ಕುಂಬಾರಗುಂಡಿ ಹಾಗೂ ನೆಲ್ಯಹುದಿಕೇರಿ ಪ್ರದೇಶಗಳಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ಯಾರೇ ಸರ್ಕಾರವನ್ನು ನಡೆಸಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಬೇಕು. ಆಡಳಿತದ ಸರ್ಕಾರ ಘೋಷಣೆ ಹಾಗೂ ಭರವಸೆಗಳು ಹಾಗೆಯೇ ಉಳಿದುಕೊಳ್ಳಬಾರದು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ವಿಪರೀತ ಮಳೆ ಹಾಗೂ ಭೂಕುಸಿತದಿಂದ ಜಿಲ್ಲೆಯ ಜನತೆ ನಲುಗಿದ್ದಾರೆ. ಇಲ್ಲಿನ ಜನರು ಶಾಶ್ವತವಾದ ಪರಿಹಾರವನ್ನು ಕೇಳುತ್ತಿದ್ದಾರೆ. ಇಲ್ಲಿನ ಜನರು ಹಣಕ್ಕೆ ಆಸೆ ಪಡುತ್ತಿಲ್ಲ. ತಾತ್ಕಾಲಿಕ ಪರಿಹಾರವನ್ನು ಯಾರೂ ನಿರಿಕ್ಷಿಸುತ್ತಿಲ್ಲ. ಸಂತ್ರಸ್ತ ಪರವಾಗಿ ಮುಂದಿನ ದಿನಗಳಲ್ಲಿ ಧ್ವನಿ ಎತ್ತುತ್ತೇವೆ ಎಂದು ನಿಖಿಲ್ ಹೇಳಿದ್ದಾರೆ.








