ರಾಮನಗರ : ಕೊರೊನಾ ವೈರಸ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಮನಗರ-ಚನ್ನಪಟ್ಟಣದ 1.20 ಲಕ್ಷ ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದರು.
ರಾಮನಗರದ ಮಂಜುನಾಥ ಕನ್ವೆಷನ್ ಹಾಲ್ ನಲ್ಲಿ ಬಡಕುಟುಂಬಗಳಿಗೆ ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರು ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಹೆಂಡತಿ ರೇವತಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ರಾಮನಗರ – ಚನ್ನಪಟ್ಟಣ ಕ್ಷೇತ್ರಗಳಿಗೆ 60 ಸಾವಿರ ಜನರಿಗೆ ಫುಡ್ ಕಿಟ್ ಕೊಡಲು ತೀರ್ಮಾನಿಸಿದ್ದೆವು. ಈಗ ಎರಡೂ ಕ್ಷೇತ್ರದಿಂದ 1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ರಾಮನಗರದಲ್ಲೇ ಮಗನ ಮದುವೆ ಮಾಡಬೇಕಿತ್ತು. ಕೊರೊನಾದಿಂದಾಗಿ ಮಾಡಲಾಗಲಿಲ್ಲ. ಹಾಗಾಗಿ ಇವತ್ತು 5.50 ಕೋಟಿ ವೆಚ್ಚದಲ್ಲಿ ರಾಮನಗರ – ಚನ್ನಪಟ್ಟಣ ಜನರಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ಮುಂದೆ ಎರಡೂ ಕ್ಷೇತ್ರದ ಪ್ರತಿ ಮನೆಗೂ ಕೂಪನ್ ಕೊಟ್ಟು ಫುಡ್ ಕಿಟ್ ಕೊಡಲಾಗುವುದು. ಮಗನ ಮದುವೆ ಸಮಾರಂಭದ ಹಣವನ್ನು ಜನರಿಗಾಗಿ ಖರ್ಚು ಮಾಡುತ್ತಿದ್ದೇನೆ ಎಂದು ತಿಳಿಸಿದರು.








