ರಾಮನಗರ : ನಿಖಿಲ್ ಕುಮಾರಸ್ವಾಮಿ ಮದುವೆಗೆ ರಾಮನಗರದಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಸೆಟ್ ನಿರ್ಮಾಣ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇತ್ತ ಕುಮಾರಸ್ವಾಮಿ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ರಾಮನಗರ ಕ್ಷೇತ್ರದ ಜನರಿಗೆ ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ರಾಜಕೀಯ ಕರ್ಮಭೂಮಿ ರಾಮನಗರದಲ್ಲೇ ಯಾಕೆ ಮದುವೆ ಮಾಡುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಈಗ ಕ್ಷೇತ್ರದ ಜನರಿಗೆ ವಿವಾಹ ಆಮಂತ್ರಣ ನೀಡಲು ತಯಾರಿ ನಡೆಸಿರುವ ಅವರು, ಲಗ್ನ ಪತ್ರಿಕೆ ಜೊತೆ ಜನರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ. ರಾಮನಗರದಲ್ಲಿ ಸುಮಾರು 68 ಸಾವಿರ ಕುಟುಂಬ ಹಾಗೂ ಚನ್ನಪಟ್ಟಣದ ಸುಮಾರು 72 ಸಾವಿರ ಕುಟುಂಬಗಳಿಗೆ ಆಮಂತ್ರಣ ಪತ್ರಿಕೆ ಜೊತೆ ಸಂಪ್ರದಾಯದಂತೆ ಗಂಡಸರಿಗೆ ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ನೀಡಲು ಹೆಚ್ ಡಿಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 17 ರಂದು ರಾಮನಗರದ ಅರ್ಚಕರಹಳ್ಳಿಯ ಜಾನಪದ ಲೋಕದ ಪಕ್ಕದ ಜಮೀನಿನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಈಗಾಗಲೇ ಸೆಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮದುವೆ ಆಮಂತ್ರಣ ಕೂಡ ಸಿದ್ಧವಾಗಿದ್ದು, ಸೋಮವಾರದಿಂದ ಕ್ಷೇತ್ರದಲ್ಲಿ ಆಮಂತ್ರಣ ನೀಡಿ ಮತದಾರರಿಗೆ ಆಹ್ವಾನ ನೀಡುವ ಬಗ್ಗೆ ಚಿಂತಿಸಲಾಗಿದೆ.








