ಬೆಳಗಾವಿ, ಮೇ 26 : ಇತ್ತೀಚೆಗಷ್ಟೇ ಟಿಟಿಡಿ ಆಡಳಿತ ಮಂಡಳಿ ಲಾಕ್ ಡೌನ್ ಪರಿಣಾಮವಾಗಿ ದೇವಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈ ಕಾರಣಕ್ಕಾಗಿ, ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿರುವ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಹೇಳಿತ್ತು.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಗೆ, ಆಸ್ತಿಯನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಜಗನ್ಮೋಹನ್ ಅವರು ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ . ನಿಮಗ್ಯಾರು ಹಕ್ಕು ಕೊಟ್ಟಿದ್ದಾರೆ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಲು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.
ಜಗನ್ ಅವರೇ ದೇವಸ್ಥಾನದ ಆಸ್ತಿ ನಿಮ್ಮಪ್ಪನ ಮನೆಯದಲ್ಲ. ನಿಮ್ಮಪ್ಪ ಕೂಡಾ ಆಸ್ತಿಯನ್ನು ಮಾರಾಟ ಮಾಡಲು ಹೋಗಿ, ವೆಂಕಟೇಶ್ವರನ ಶಾಪದಿಂದ ಸತ್ತು ಹೋದ. ಎಚ್ಚರಿಕೆ ಇರಲಿ, ತಿರುಪತಿ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಿ, ನಿಮ್ಮ ಸ್ವಾರ್ಥಕ್ಕೆ ಬಳಸಿಕೊಂಡರೆ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯಲಿದೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ. ಕರ್ನಾಟಕದಲ್ಲಿ ‘ತಿರುಪತಿ ಉಳಿಸಿ’ ಎನ್ನುವ ಆಂದೋಲನವನ್ನು ಶ್ರೀರಾಮಸೇನೆ ಮೇ 27ರಂದು ಹಮ್ಮಿಕೊಂಡಿದ್ದು, ತಿರುಪತಿ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಬೇಡಿ ಎನ್ನುವುದು ನಮ್ಮ ಹೋರಾಟದ ಉದ್ದೇಶ ಎಂದು ಮುತಾಲಿಕ್ ಹೇಳಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ದೇವಸ್ಥಾನದ ಆಡಳಿತ ಮಂಡಳಿ ವಿವಿಧ ಬ್ಯಾಂಕುಗಳಲ್ಲಿ 12 ಸಾವಿರ ಕೋಟಿ ರೂಪಾಯಿಗೂ ಅಧಿಕ ನಿಶ್ಚಿತ ಠೇವಣಿಯಿರಿಸಿದೆ. 7 ಸಾವಿರದ 235 ಕೆಜಿ ತೂಕದ ಚಿನ್ನವನ್ನು ಎರಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿವಿಧ ಚಿನ್ನದ ಠೇವಣಿ ಯೋಜನೆಗಳಡಿ ಠೇವಣಿಯಿರಿಸಿದೆ. ವಾರ್ಷಿಕವಾಗಿ ಚಿನ್ನದ ಠೇವಣಿಯಿಂದ 100 ಕೆಜಿಯಷ್ಟು ಬಡ್ಡಿ ಚಿನ್ನ ಸಿಗುತ್ತಿದೆ ಇಷ್ಟೆಲ್ಲಾ ಆದಾಯ ಇದ್ದು ದೇವಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಕಾರಣ ನೀಡಿ ಆಸ್ತಿಯನ್ನು ಮಾರಾಟ ಮಾಡಲು ಹೊರಟಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಆಸ್ತಿಗಳ ಹರಾಜಿಗೆ ಸಂಬಂಧಿಸಿದಂತೆ ಹಲವಾರು ನಾಯಕರು ಮತ್ತು ಭಕ್ತರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಹರಾಜನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಟಿಟಿಡಿ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ನಿರ್ಧಾರದ ಬಗ್ಗೆ ಭಕ್ತರು ಮತ್ತು ಇತರ ಧಾರ್ಮಿಕ ಮುಖಂಡರನ್ನು ಸಂಪರ್ಕಿಸುವಂತೆ ಸರ್ಕಾರ ಹೇಳಿದೆ .