IND vs PAK : ಮ್ಯಾಚ್ ನೋಡಿದ್ರೆ 5 ಸಾವಿರ ದಂಡ, ಡಿಬಾರ್ ಶಿಕ್ಷೆ – ಶ್ರೀನಗರ IIT ಆದೇಶ
ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಏಷ್ಯಾಕಪ್ ಟಿ 20 ಕ್ರಿಕೆಟ್ ಪಂದ್ಯವನ್ನ ನೋಡಲು ಇಡೀ ದೇಶವೇ ಕಾದು ಕುಳಿತಿದೆ ಆದರೆ ಪಂದ್ಯ ನೋಡದಂತೆ ಶ್ರೀನಗರದ IIT ವಿದ್ಯಾ ಸಂಸ್ಥೆ ಕಟ್ಟಪ್ಪಣೆ ಹೊರಡಿಸಿದೆ. ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ವಿದ್ಯಾರ್ಥಿಗಳಿಗೆ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಹೊರಡಿಸಿದ ನೋಟಿಸ್ನಲ್ಲಿ, ಪಂದ್ಯದ ಸಮಯದಲ್ಲಿ ಹೊರಬರದಂತೆ ನಿಗದಿಪಡಿಸಿದ ಕೊಠಡಿಗಳಲ್ಲಿ ಉಳಿಯುವಂತೆ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಭಾನುವಾರ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕ್ ಮತ್ತು ಭಾರತ ಹತ್ತು ತಿಂಗಳ ನಂತರ ಮುಖಾಮುಖಿಯಾಗುತ್ತಿವೆ. ಪಂದ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳು ಕೊಠಡಿಗಳಿಗೆ ಪ್ರವೇಶಿಸದಂತೆ ಹಾಗೂ ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಲು ಅನುಮತಿ ನೀಡದಂತೆ ನಿರ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿದೆ.
ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಿದರೆ ಆ ನಿರ್ದಿಷ್ಟ ಕೊಠಡಿಯಲ್ಲಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಹಾಸ್ಟೆಲ್ ವಸತಿಯಿಂದ ಡಿಬಾರ್ ಮಾಡಲಾಗುತ್ತದೆ. ಪಂದ್ಯ ವೀಕ್ಷಣೆಯಲ್ಲಿ ತೊಡಗಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕನಿಷ್ಠ 5,000 ದಂಡ ವಿಧಿಸಲಾಗುತ್ತದೆ’ ಎನ್ಐಟಿ ಹೇಳಿದೆ.
2016 ರಲ್ಲಿ ಭಾರತ ಟಿ 20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಮಿಫೈನಲ್ ಸೋಲಿನ ನಂತರ ಇನ್ಸ್ಟಿಟ್ಯೂಟ್ನಲ್ಲಿ ಹೊರರಾಜ್ಯ ಮತ್ತು ಸ್ಥಳಿಯರ ನಡುವೆ ಗಲಭೆ ಶುರುವಾಗಿತ್ತು. ಇದರಿಂದಾಗಿ ಹಲವಾರು ದಿನಗಳವರೆಗೆ ಸಂಸ್ಥೆಯನ್ನ ಮುಚ್ಚಲಾಗಿತ್ತು. ಹಾಗಾಗಿ ಸಂಸ್ಥೆ ಮುನ್ನೆಚ್ಚೆರಿಕೆ ತೆಗೆದುಕೊಂಡಿದೆ.








