ಸ್ವಯಂ ಘೋಷಿತ ಕೈಲಾಸ ದೇಶವನ್ನು ನಿರ್ಮಿಸಲು ಯತ್ನಿಸಿದ ವಿವಾದಿತ ಧರ್ಮಗುರು ನಿತ್ಯಾನಂದ ಮತ್ತೊಮ್ಮೆ ಭಾರಿ ವಿವಾದದ ನಡುವೆ ಸಿಕ್ಕಿಕೊಂಡಿದ್ದಾನೆ. ಈ ಬಾರಿ ಅವನ ಗುರಿ ದಕ್ಷಿಣ ಅಮೆರಿಕಾದ ಬೊಲಿವಿಯಾದ ಅಮೆಜಾನ್ ಪ್ರದೇಶ. 3900 ಚದರ ಕಿ.ಮೀ. ಬುಡಕಟ್ಟು ಭೂಮಿಯನ್ನು ಕಬಳಿಸಲು ಅವನ ತಂಡ ಯತ್ನಿಸಿದ್ದು, ಬೊಲಿವಿಯಾ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಈ ಅಕ್ರಮ ಒಪ್ಪಂದವನ್ನು ರದ್ದುಗೊಳಿಸಿದೆ.
ನಿತ್ಯಾನಂದ ಮತ್ತು ಅವನ ಶಿಷ್ಯರು ಮೊದಲು ಬೊಲಿವಿಯಾದಲ್ಲಿ ಬುಡಕಟ್ಟು ಜನಾಂಗದ ಭೂಮಿಯನ್ನು ಮೋಸದಿಂದ ಖರೀದಿಸಿದರೆಂದು ಆರೋಪಿಸಲಾಗಿದೆ. ಇದನ್ನು ತಮ್ಮ ಕೈಲಾಸದ ವಿಸ್ತರಣೆ ಎಂದು ಘೋಷಿಸಲು ಯತ್ನಿಸಿದ್ದು, 1000 ವರ್ಷಗಳ ಗುತ್ತಿಗೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಭೂಮಿಯ ಗುತ್ತಿಗೆ ಮೊತ್ತ ವರ್ಷಕ್ಕೆ 8.96 ಲಕ್ಷ ರೂ., ತಿಂಗಳಿಗೆ 74,667 ರೂ., ದಿನಕ್ಕೆ 2,455 ರೂ. ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೊಲಿವಿಯಾ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿತ್ಯಾನಂದ ಕೈಲಾಸ ಎಂಬ ನಕಲಿ ದೇಶದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮಧ್ಯೆ, ನಿತ್ಯಾನಂದ ಗುಂಪಿನ 20 ಜನರನ್ನು ದೇಶದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿಗಳು ತಿಳಿಸುತ್ತಿವೆ.
ಈ ಬೆಳವಣಿಗೆಯಿಂದ ನಿತ್ಯಾನಂದನ ‘ಕೈಲಾಸ’ ಮಿಥ್ಯ ಮತ್ತೊಮ್ಮೆ ಬಯಲಿಗೆ ಬಂದಿದೆ. ಆದರೆ, ಈ ಭೂಮಿಯ ಹಗರಣಕ್ಕೆ ನಿತ್ಯಾನಂದನ ಹೊಸ ಪ್ರತಿಕ್ರಿಯೆ ಏನು? ಅವರ ಮುಂದಿನ ಹೆಜ್ಜೆ ಏನು? ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ.