ದೆಹಲಿಯ ನಿಜಾಮುದೀನ್ ಮಸೀದಿ ದೇಶದ ಕೊರೊನಾ ವೈರಸ್ ಸೋಂಕಿನ ಕೇಂದ್ರವಾಗಿ ಪರಿಣಮಿಸಿದೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸಿದ 9 ಸಾವುಗಳಿಗೆ ಹಾಗೂ 300 ಶಂಕಿತ ಕೊರೊನಾ ಪ್ರಕರಣಗಳಿಗೆ ನಿಜಾಮುದ್ದಿನ್ ಮಸೀದಿ ನೇರ ಕಾರಣವಾಗಿದೆ. ಇದೇ ತಿಂಗಳು ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ಹಲವರಲ್ಲಿ ಕೋವಿಡ್-19 ದೃಢಪಟ್ಟಿದೆ. ಮಾರ್ಚ್ 1 ರಿಂದ 15ರ ವರೆಗೂ ನಡೆದ ತಬ್ಲಿಗಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಿಂದ 2,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು.
ತಬ್ಲಿಗಿ ಜಾಮಾಅತ್‌ನ ಮುಖ್ಯ ಕಚೇರಿಯಲ್ಲಿದ್ದವರ ಪೈಕಿ ಕನಿಷ್ಠ 37 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಭಾನುವಾರ 24 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಇಲ್ಲಿನ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ಸೋಮವಾರ ಹೈದರಾಬಾದ್‌ನಲ್ಲಿ ಸಾವಿಗೀಡಾಗಿದ್ದಾರೆ. ಶ್ರೀನಗರದಲ್ಲಿ ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.
ಕರ್ನಾಟಕಕ್ಕೂ ಸೋಂಕು!
ನಿಜಾಮುದ್ದಿನ್ ವೆಸ್ಟ್ನಲ್ಲಿರುವ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಕರ್ನಾಟಕದಿಂದ 45 ಜನ ಭಾಗವಹಿಸಿದ್ದರು ಎಂಬ ಮಾಹಿತಿ ತಿಳಿದಿದ್ದು, ಈ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
“ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾರ್ಚ್ 10 ರಂದು ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದಾರೆ”
ಆದ್ದರಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಅವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ನಲ್ಲಿಡುವ ಕಾರ್ಯದಲ್ಲಿ ರಾಜ್ಯ ಸರಕಾರ ಕಾರ್ಯಪ್ರವೃತ್ತವಾಗಿದೆ. 45 ಜನರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ ಎಂದು ಶ್ರೀ ರಾಮುಲು ತಿಳಿಸಿದ್ದಾರೆ.








