ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಹಾಗೂ ಎ7 ಆರೋಪಿ ಅನುಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.
ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್, ಅನುಕುಮಾರ್ ಪರವಾಗಿ ಹಿರಿಯ ವಕೀಲ ರಾಮಸಿಂಗ್ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ಕೋರ್ಟ್ ಇಂದು ಅರ್ಜಿ ವಜಾಗೊಳಿಸಿತು.
ಆಗಸ್ಟ್ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಆ.28 ರಂದು ವಿಚಾರಣೆ ನಡೆಸಿತ್ತು. ಆದರೆ, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತ್ತು. ಶನಿವಾರ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನಿರಾಕರಿಸಿತು.
ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಎಂದು ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ.
ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್ ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ. ಅವರು ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ. ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ವಾದ-ವಿವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತು.