ಕಲಬುರ್ಗಿ : ಕೋವಿಡ್ -19 ಹಿನ್ನೆಲೆ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ನಿರ್ಧರಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ದೇಶ ಹಾಗೂ ರಾಜ್ಯದಲ್ಲಿ ವ್ಯಾಪಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್ ಪರಿಣಾಮವಾಗಿ ಒಂದು ಕಡೆ ಸಾರ್ವಜನಿಕರು ಕೂಲಿ ಕಾರ್ಮಿಕರು ಸೇರಿದಂತೆ ಹಲವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮತ್ತೊಂದು ಕಡೆ ಸಾವಿರಾರು ಸಂಖ್ಯೆಯ ಸೋಂಕಿತರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಈ ಸಲದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಬಡವರಿಗೆ ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಖರ್ಗೆ, ಪ್ರತಿವರ್ಷ ಹುಟ್ಟುಹಬ್ಬದ ಸಮಯದಲ್ಲಿ ಬಂದು ನೀವೆಲ್ಲ ಆಶೀರ್ವಾದ ನೀಡಿದ್ದೀರಿ. ಆದರೆ, ಈ ಸಲ ಕೋವಿಡ್‌ನಿಂದಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಜುಲೈ 22ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಹಾಗಾಗಿ ಇದೇ ಜುಲೈ 21ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಈ ಸಲ ನನ್ನ ಹುಟ್ಟುಹಬ್ಬ ಆಚರಿಸದೆ ಸೋಂಕಿತರ ಕುಟುಂಬದವರಿಗೆ ಕೈಲಾದ ಸಹಾಯ ನೀಡಬೇಕೆಂದು ಕೋರಿದರು.