ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಮುಂದಿನ 3 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು.
ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಜೆ.ಪಿ ನಡ್ಡಾ ಅವರಿಗೆ ಸಿಹಿ ನೀಡಿ ಶುಭಕೋರಲು ಹೋಗಿದ್ದೆ. ಭೇಟಿ ವೇಳೆ ನಾಯಕತ್ವ ಬದಲಾವಣೆ ಕುರಿತ ಚರ್ಚೆ ನಡೆದಿಲ್ಲ. ಖುದ್ದು ರಾಷ್ಟ್ರೀಯ ಅಧ್ಯಕ್ಷರೂ ಕೂಡ ಇದನ್ನೇ ಹೇಳಿದ್ದಾರೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಸಿಎಂ ಬದಲಾವಣೆ ಆಗ್ತಾರೆ ಎಂಬ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ನಿನ್ನೆಯಿಂದ ಸುದ್ದಿ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಕೂಡ ಕಾಕತಾಳೀಯ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.
ದೆಹಲಿ ಭೇಟಿ ವೇಳೆ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ನಿತಿನ್ ಗಡ್ಕರಿ ಅವರ ಜತೆ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇನೆ. ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಟೆಂಡರ್ ಕರೆಯುವಂತೆ ಮನವರಿಕೆ ಮಾಡಿಕೊಡಲು ಗಡ್ಕರಿ ಜತೆ ಚರ್ಚೆ ಮಾಡಿರುವೆ. ಅದನ್ನು ಬಿಟ್ಟು ರಾಜಕೀಯ ಚರ್ಚೆ ನಡೆಸಿಲ್ಲ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ, ಅವರು ಬ್ಯೂಸಿಯಾಗಿರುವ ಕಾರಣ ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂದರು.