ಇಂದು ಸಹ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲೂ ಇವತ್ತು ದೃಢಪಟ್ಟಿರುವ ಸೋಂಕು ಪ್ರಕರಣಗಳ ಪೈಕಿ ಇಬ್ಬರಿಗೆ ಸೋಂಕು ತಗುಲಿರುವ ರೀತಿ ಜನರ ಎದೆಬಡಿತ ಹೆಚ್ಚಿದೆ. ಇದಕ್ಕೆ ಕಾರಣ, ಅವರ ಟ್ರಾವೆಲ್ ಹಿಸ್ಟರಿ.
ಹೌದು..! ಇಲ್ಲಿವರೆಗೂ ಬಹುತೇಕ ವಿದೇಶಗಳಿಗೆ ಹೋಗಿ ವಾಪಸ್ ಬಂದಿದ್ದ ವ್ಯಕ್ತಿಗಳಲ್ಲೇ ಕೊರೊನಾ ಸೋಂಕು ದೃಢವಾಗಿತ್ತು. ಆದ್ರೀಗ, ಮೈಸೂರಿನ ನಂಜನಗೂಡಿನ 35 ವರ್ಷದ ವ್ಯಕ್ತಿ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಆದ್ರೆ, ಈ ಇಬ್ಬರು ಯಾವುದೇ ಹೊರ ದೇಶಗಳಿಗೆ ಹೋಗಿ ಬಂದಿಲ್ಲ. ಅಲ್ಲದೆ, ಕೊರೊನಾ ವೈರಸ್ ದೃಢಪಟ್ಟಿರುವ ಅಥವಾ ಶಂಕೆ ಇರುವ ಯಾವುದೇ ವ್ಯಕ್ತಿಗಳ ಜೊತೆ ಸಂಪರ್ಕವನ್ನೂ ಮಾಡಿಲ್ಲ. ಆದ್ರೂ ಈ ಇಬ್ಬರಲ್ಲಿ ಕೊರೊನಾ ದೃಢಪಟ್ಟಿದೆ.
ಸದ್ಯ ಇವರ ಬಗೆಗಿನ ವೈದ್ಯಕೀಯ ತನಿಖೆ ಪ್ರಗತಿಯಲ್ಲಿದ್ದು, ಇವರ ಸಂಪರ್ಕದಲ್ಲಿರುವವರನ್ನು ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.








