ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆಗೆ ಬಣ್ಣ ಹಚ್ಚಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ನಡೆಸಿದ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ಭಾವನೆ ಮೂಡಿತ್ತು. ಆದರೆ ಈಗ ಮತ್ತೆ ‘ಸಿಎಂ ಗದ್ದಲ’ ರಾಜಕೀಯದಲ್ಲಿ ಹೊಸ ತಿರುವು ತೆಗೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಯ್ಕೆ ಮಾಡುವ ಸಮಯದಲ್ಲಿ ಯಾವುದೇ ಗಡುವನ್ನು ಹೈಕಮಾಂಡ್ ನೀಡಿರಲಿಲ್ಲ ಎಂದು ಹೇಳಿದ್ದಾರೆ.
CLP ಸಭೆಯಲ್ಲಿ ಸಿಎಂ ಆಯ್ಕೆ ಪ್ರಕ್ರಿಯೆ ನಡೆದಿದ್ದು, AICC ವೀಕ್ಷಕರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ಹೈಕಮಾಂಡ್ ವಿಶ್ವಾಸದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಹುದ್ದೆ ಬದಲಾವಣೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಹಲವಾರು ಊಹಾಪೋಹಗಳು ಮುಂದುವರಿದರೂ, ರಾಜ್ಯ ಸರ್ಕಾರದೊಳಗಿನ ಹಿರಿಯ ಸಚಿವರಿಂದ ಬಂದಿರುವ ಈ ಸ್ಪಷ್ಟನೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಹೈಕಮಾಂಡ್ ಯಾವುದೇ ಬದಲಾವಣೆಯ ಸನ್ನಿವೇಶವನ್ನು ಸ್ಪಷ್ಟವಾಗಿ ನಿರಾಕರಿಸಿದೆ ಎಂದು ಜಾರ್ಜ್ ಹೇಳಿದ್ದಾರೆ.








