ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ ಮೂಲಗಳು ಸ್ಪಷ್ಟನೆ ನೀಡಿವೆ.
ಮೂಲಗಳ ಪ್ರಕಾರ, ಈ ರಾಜ್ಯಗಳ ಚುನಾವಣೆಗಳು ಸದ್ಯಕ್ಕೆ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಮುಂಗಡ ಚುನಾವಣೆ ನಡೆಸುವ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಫೆಬ್ರವರಿ 2027ರಲ್ಲಿ ನಡೆಯಲಿರುವ ಎರಡನೇ ಹಂತದ ಜನಗಣತಿ ಹಾಗೂ ಕುಂಭಮೇಳದಂತಹ ಬೃಹತ್ ಕಾರ್ಯಕ್ರಮಗಳ ಹಿನ್ನೆಲೆ ಚುನಾವಣೆ ದಿನಾಂಕಗಳಲ್ಲಿ ಬದಲಾವಣೆ ಸಾಧ್ಯತೆ ಕುರಿತು ಚರ್ಚೆಗಳು ನಡೆದಿದ್ದವು.
ಆದರೆ, ಚುನಾವಣೆ ಮತ್ತು ಜನಗಣತಿ ಕಾರ್ಯಗಳ ನಡುವೆ ಸಮನ್ವಯ ಸಾಧಿಸಲು ಅಗತ್ಯವಿದ್ದರೆ ಜನಗಣತಿಯ ಎರಡನೇ ಹಂತವನ್ನು ಮುಂಚಿತವಾಗಿ ಆರಂಭಿಸುವ ಆಯ್ಕೆಯನ್ನೂ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ನೌಕರರ ಲಭ್ಯತೆ, ಭದ್ರತಾ ವ್ಯವಸ್ಥೆ ಹಾಗೂ ಆಡಳಿತಾತ್ಮಕ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವೇಳಾಪಟ್ಟಿಯನ್ನು ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಹೀಗಾಗಿ, ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಸುದ್ದಿಗಳಿಗೆ ಸದ್ಯ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಚುನಾವಣೆ ಆಯೋಗದ ಅಧಿಕೃತ ಪ್ರಕಟಣೆ ಬಂದ ಬಳಿಕವೇ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.







