ಕಲಬುರಗಿ: ನಮ್ಮ ಹೋರಾಟ ರೈತರಿಗಾಗಿ ಮಾತ್ರ ಇದೆ. ಯಾವುದೇ ಕುಟುಂಬದ ವಿರುದ್ಧವೂ ಇಲ್ಲ ಎಂದು ಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಖ್ಯಮಂತ್ರಿಯಾಗಲು ಹೋರಾಟ ನಡೆಸುತ್ತಿಲ್ಲ. ರಾಜ್ಯದ ರೈತರಿಗೆ ಸಂಕಷ್ಟ ಬಂದಿದೆ. ಸಂಕಷ್ಟಕ್ಕೆ ಕಾರಣವಾಗಿರುವ ವಕ್ಫ್ ವಿರುದ್ಧ ಜನಜಾಗೃತಿಗಾಗಿ ಹೋರಾಟ ನಡೆಸಲಾಗುತ್ತಿದೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಆಗಿರುವ ಸೋಲಿನ ಹೊಣೆಯನ್ನು ಎಲ್ಲ ನಾಯಕರು ಹೊರಬೇಕು ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೆದ್ದರೆ ಅವರು ಹೊರಬೇಕು. ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ ಮಾತ್ರಕ್ಕೆ ನಾವೆಲ್ಲ ಕೇಳಬೇಕು ಎಂದಿದ್ದಾರೆ.








