ಈ ವರ್ಷ ಭಾರತೀಯ ಮುಸ್ಲಿಮರಿಗೆ ಪವಿತ್ರ ಹಜ್ ಯಾತ್ರೆ ಇಲ್ಲ
ರಿಯಾದ್, ಜೂನ್ 23: ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಈ ವರ್ಷ ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಈ ವರ್ಷ ಹಜ್ ಯಾತ್ರೆ ತೆರಳಲು 2.3 ಲಕ್ಷಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳ ಸಲ್ಲಿಸಿರುವ ಅರ್ಜಿ ಹಣವನ್ನು ಯಾವುದೇ ಕಡಿತವಿಲ್ಲದೆ ನೇರ ವರ್ಗಾವಣೆ ಮೂಲಕ ಹಿಂತಿರುಗಿಸಲಾಗುವುದು ಎಂದು ಮುಕ್ತಾರ್ ಅಬ್ಬಾಸ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಹಜ್ ಮತ್ತು ಉಮ್ರಾ ಮಂತ್ರಿ ಮೊಹಮ್ಮದ್ ಸಲೇಹ್ ಬಿನ್ ತಾಹರ್ ಬೆಂಟನ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅವರು ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಜ್‌ಯಾತ್ರೆಗಾಗಿ ಈ ಬಾರಿ ಯಾರನ್ನೂ ಕಳುಹಿಸದಂತೆ ಮನವಿ ಮಾಡಿದ್ದಾರೆ. ಸೌದಿ ನಿರ್ಧಾರವನ್ನು ಗೌರವಿಸುತ್ತೇವೆ ಎಂದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್, ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮುಸ್ಲಿಮರನ್ನು ಹಜ್ ಯಾತ್ರೆಗೆ ಕಳುಹಿಸದಂತೆ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಹಜ್ ಯಾತ್ರೆ ಕೈಗೊಳ್ಳಲು 2 ಸಾವಿರದ 143 ಮಂದಿ ಅರ್ಜಿ ಸಲ್ಲಿಸಿದ್ದು, ಅವರನ್ನು ಮುಂದಿನ ವರ್ಷ ಕಳುಹಿಸಲು ಅವಕಾಶ ನೀಡಲಾಗುವುದು ಎಂದು ನಖ್ವಿ ಹೇಳಿದ್ದಾರೆ.
ಕೊರೊನಾ ಹಿನ್ನಲೆಯಲ್ಲಿ ಅಂತರರಾಷ್ಟ್ರೀಯ ಯಾತ್ರಾರ್ಥಿಗಳು ಪವಿತ್ರವಾದ ಹಜ್ ಯಾತ್ರೆಯಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಹೇರುವ ನಿರ್ಧಾರವನ್ನು ಸೌದಿ ಅರೇಬಿಯಾ ತೆಗೆದುಕೊಂಡಿದೆ.