ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದು ದಿನಗಳೇ ಕಳೆದರೂ ಅದರ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅತಿ ದೊಡ್ಡ ರಿಯಾಲಿಟಿ ಶೋನ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದರು. ಇನ್ನು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಅಶ್ವಿನಿ ಗೌಡ, ಹೊರಬಂದ ತಕ್ಷಣ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಗಿಲ್ಲಿ ನಟನ ಬಡತನದ ಬಗ್ಗೆ ಅಶ್ವಿನಿ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದವು. ಇದೀಗ ಟ್ರೋಲ್ ಮತ್ತು ಟೀಕೆಗಳ ಬಳಿಕ ಅಶ್ವಿನಿ ಗೌಡ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ವಿವಾದದ ಕಿಡಿ ಹೊತ್ತಿಸಿದ್ದು ಆ ಒಂದು ಹೇಳಿಕೆ
ಬಿಗ್ ಬಾಸ್ ಮನೆಯಿಂದ ಹೊರಬಂದ ಕೂಡಲೇ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಶ್ವಿನಿ ಗೌಡ, ಗಿಲ್ಲಿ ನಟನ ಗೆಲುವಿನ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಬಡವರ ಮಕ್ಕಳು ಬೆಳಿಬೇಕು ಅನ್ನೋದು ಡಾಲಿ ಧನಂಜಯ್ ಅವರ ಡೈಲಾಗ್. ಆದರೆ ಇಲ್ಲಿ ಗಿಲ್ಲಿ ನಿಜವಾಗಿಯೂ ಬಡವನಾ ಎಂಬುದು ಪ್ರಶ್ನೆ. ಬಡವ ಮತ್ತು ಬಡವನಂತೆ ಕಾಣುವ ಗೆಟಪ್ ಎರಡೂ ಒಂದೇ ಅಲ್ಲ. ಬಡತನವನ್ನು ಆಟದಲ್ಲಿ ಸ್ಟ್ರಾಟೆಜಿ ಕಾರ್ಡ್ ಆಗಿ ಬಳಸಬಾರದು. ಗಿಲ್ಲಿಯ ಆಟ ಮತ್ತು ಗೆಟಪ್ ಜನರಿಗೆ ಇಷ್ಟವಾಗಿರಬಹುದು ಎಂದು ಹೇಳುವ ಮೂಲಕ ಗಿಲ್ಲಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಕಾವ್ಯ ಶೈವ ಕೊಟ್ಟಿದ್ದರು ತಿರುಗೇಟು
ಅಶ್ವಿನಿ ಗೌಡ ಅವರ ಈ ಹೇಳಿಕೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾವ್ಯ ಶೈವ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದು ಪೋಸ್ಟ್ ಹಾಕಿದ್ದ ಕಾವ್ಯ, ಗಿಲ್ಲಿ ನಿನಗೆ ಅಭಿನಂದನೆಗಳು, ಝೀರೋ ಇಂದ ಹೀರೋ ಆಗಿದ್ದೀಯಾ. ನಿನಗೆ ಒಳ್ಳೆಯದಾಗಲಿ, ಆದಷ್ಟು ಬೇಗ ಆಕ್ಷನ್ ಕಟ್ ಹೇಳುವಂತಾಗಲಿ ಎಂದು ಹಾರೈಸಿದ್ದರು. ಕಾವ್ಯ ಅವರ ಈ ಪೋಸ್ಟ್ ಅಶ್ವಿನಿ ಗೌಡಗೆ ನೀಡಿದ ನೇರ ಉತ್ತರ ಎಂದೇ ಬಿಂಬಿತವಾಗಿತ್ತು. ಇದರ ಬೆನ್ನಲ್ಲೇ ನೆಟ್ಟಿಗರು ಅಶ್ವಿನಿ ಗೌಡ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.
ನನ್ನ ಮಾತಿನ ಅರ್ಥ ಅದಲ್ಲ ಎಂದ ಅಶ್ವಿನಿ ಗೌಡ
ಸತತ ಟೀಕೆಗಳಿಗೆ ಗುರಿಯಾದ ಬಳಿಕ ಅಶ್ವಿನಿ ಗೌಡ ಇದೀಗ ಮೌನ ಮುರಿದಿದ್ದಾರೆ. ತಮ್ಮ ಗೆಳತಿ ಜಾಹ್ನವಿ ಅಭಿನಯದ ಯುವ ರಾಬಿನ್‌ಹುಡ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ, ಮಾಧ್ಯಮಗಳ ಮುಂದೆ ತಮ್ಮ ಹಳೆ ಹೇಳಿಕೆಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ನಾನು ಬಡವ ಎಂದು ಗಿಲ್ಲಿ ಎಲ್ಲೂ ಹೇಳಿಕೊಂಡಿಲ್ಲ ಅಂತ ನಾನೇ ಹೇಳಿದ್ದೆ. ಆದರೆ ಹೊರಗಡೆ ಗಿಲ್ಲಿ ಬಡವ ಎಂದು ಪ್ರಚಾರ ಆಗುತ್ತಿತ್ತು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾನು ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ ಅಷ್ಟೇ ಹೊರತು, ಗಿಲ್ಲಿ ಹಾಗೆ ಹೇಳಿದ್ದಾನೆ ಎಂದು ನಾನು ಹೇಳಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಟ್ರೋಲಿಗರಿಗೆ ಡೋಂಟ್ ಕೇರ್
ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸಿರುವ ಅಶ್ವಿನಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ನೆಗೆಟಿವ್ ಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಚೈತ್ರಾ ಕುಂದಾಪುರ ಮತ್ತು ಜಾಹ್ನವಿ ನಡುವೆ ನಡೆದ ಗಾಯದ ಫೋಟೋ ಸಮರದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮುಗಿದರೂ ಸ್ಪರ್ಧಿಗಳ ನಡುವಿನ ಮಾತಿನ ಯುದ್ಧ ಮಾತ್ರ ಇನ್ನೂ ಮುಗಿದಿಲ್ಲ ಎನ್ನುವುದು ಅಶ್ವಿನಿ ಗೌಡ ಅವರ ಈ ಸ್ಪಷ್ಟನೆಯಿಂದ ಸಾಬೀತಾಗಿದೆ.








