ಗುರುವಾರದಂದು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಬಂದ್ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುವುದಿಲ್ಲವೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಫೆಬ್ರವರಿ 13ರಂದು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ, ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಕರ್ನಾಟಕ ಬಂದ್ ಗೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಣೆ ಮಾಡಿದ್ದು, ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುವುದಿಲ್ಲವೆಂದು ಹೇಳಿರುವ ಶಿಕ್ಷಣ ಸಚಿವರು, ಅದಾಗಿಯೂ ಆಯಾ ಜಿಲ್ಲಾಡಳಿತಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬಹುದಾಗಿದೆಯೆಂದು ಸ್ಪಷ್ಟ ಪಡಿಸಿದ್ದಾರೆ








