ಬೆಂಗಳೂರು, ಮೇ 23 : ಜಕಾರ್ತದಿಂದ ಶನಿವಾರ ಬೆಳಗಿನ ಜಾವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ 50 ಮಂದಿ ಅನಿವಾಸಿ ಭಾರತೀಯರು ತಮಗೆ ಹೋಟೆಲ್ ಕ್ವಾರಂಟೈನ್ ಬೇಡ, ನಮ್ಮನ್ನು ಮನೆಗೆ ಕಳುಹಿಸಿ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.
ಇಂಡೋನೇಷ್ಯಾದ ಜರ್ಕಾತದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗಿನ ಜಾವ 1.40ರ ವೇಳೆಗೆ ಎಐ-1311 ವಿಮಾನದಲ್ಲಿ, 214 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಇವರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.
ಆರೋಗ್ಯ ತಪಾಸಣೆ ನಂತರ ಇವರೆಲ್ಲರನ್ನೂ 14 ದಿನಗಳ ಕ್ವಾರಂಟೈನ್ ಗೆ ಕಳುಹಿಸಿಕೊಡಲಾಗಿದ್ದು, ಬಹುತೇಕರು ಹೋಟೆಲ್ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ 50 ಮಂದಿ ಅನಿವಾಸಿ ಭಾರತೀಯರು ಮಾತ್ರ ನಮ್ಮ ಬಳಿ ದುಡ್ಡಿಲ್ಲ ಹೋಟೆಲ್ ಕ್ವಾರಂಟೈನ್ ಮಾಡಬೇಡಿ, ನಮ್ಮನ್ನು ಮನೆಗೆ ಕಳುಹಿಸಿ ಅಂತ ಪಟ್ಟುಹಿಡಿದಿದ್ದರು. ನಂತರ ಅಧಿಕಾರಿಗಳು, ವಿಮಾನ ನಿಲ್ದಾಣದಲ್ಲೇ ಹಠ ಹಿಡಿದು ಕುಳಿತಿದ್ದ 50 ಮಂದಿಯ ಮನವೊಲಿಸಿ ಕೊನೆಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಹಜ್ ಭವನದಲ್ಲಿ ಕ್ವಾರಂಟೈನ್ ಗೆ ಒಳಪಡಿಸಿದರು.








