ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್‍ಡೌನ್ ಮಾಡುವ ಪ್ರಶ್ನೇ ಇಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೇನ್‍ಮೆಂಟ್ ಪ್ರದೇಶಗಳು ಹಾಗೂ ಮಾಲ್ ಹೊರತುಪಡಿಸಿದಂತೆ ಉಳಿದ ಎಲ್ಲಾ ಪ್ರದೇಶಗಳಲ್ಲಿ ಜೂ.5ರಿಂದಲೇ ಲಾಕ್‍ಡೌನ್ ಹಿಂಪಡೆಯಲಾಗಿದೆ. ಮತ್ತೆ ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡಲಾಗುತ್ತಿದೆ ಎಂಬುದು ಕೇವಲ ವದಂತಿ ಅಷ್ಟೇ. ಅಂತಂಹ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕೆಲ ಖಾಸಗಿ ವಾಹಿನಿಗಳು, ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಪ್ರಸಾರವಾಗುತ್ತಿದೆ. ಈ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟನೆ ಪಡೆಯದೇ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ವದಂತಿಗಳನ್ನು ಹರಡುವುದು ಅಪರಾಧ ಎಂದಿದ್ದಾರೆ.
ರಾಜ್ಯದ ಆರ್ಥಿಕತೆ ಪುನರುಜ್ಜೀವನ ನೀಡಲು ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. ಆದರೆ, ಜನರು ಒಂದು ಕಡೆ ಸೇರುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡುವ ಸಲುವಾಗಿ ಕೆಲವೊಂದು ವಲಯಕ್ಕೆ ಲಾಕ್‍ಡೌನ್ ಮುಂದುವರೆಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರ ನೀಡಿದ್ದಾರೆ.








