ಮೆಲ್ಬೋರ್ನ್: ಸ್ವದೇಶಿ ಮಂತ್ರ ಜಪಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್‍ನಲ್ಲಿ ತಯಾರಾಗುವ ಡ್ಯೂಕ್ಸ್ ಚೆಂಡುಗಳನ್ನು ದೇಶಿಯ ಟೂರ್ನಿಗಳಲ್ಲಿ ಬಳಸಲ್ಲ ಎಂದಿದೆ.
ಡ್ಯೂಕ್ಸ್ ಬದಲು ಸ್ವದೇಶದಲ್ಲೇ ತಯಾರಿಸುವ ಕೂಕಬುರಾ ಚೆಂಡುಗಳನ್ನು ಬಳಕೆ ಮಾಡುವುದಾಗಿ ಹೇಳಿದೆ. ಇದು ಮುಂದಿನ ಋತುವಿನ ಶೆಫೀಲ್ಡ್ ಶೀಲ್ಡ್ ಟೂರ್ನಿಯಿಂದಲೇ ಜಾರಿಯಾಗಲಿದೆ. 2019ರ ಆಷಸ್ ಟೆಸ್ಟ್ ಸರಣಿಯ ಮೇಲೆ ಕಣ್ಣಿಟ್ಟಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಆಟಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 2016-17ರ ಋತುವಿನ ಶೆಫೀಲ್ಡ್ ಶೀಲ್ಡ್ ಟೂರ್ನಿಯಿಂದ ಡ್ಯೂಕ್ಸ್ ಚೆಂಡುಗಳ ಬಳಕೆಗೆ ಹಸಿರು ನಿಶಾನೆ ತೋರಿತ್ತು.

ಇಂಗ್ಲೆಂಡ್‍ನಲ್ಲಿ ಡ್ಯೂಕ್ಸ್ ಚೆಂಡುಗಳು ಬಳಕೆಯಲ್ಲಿವೆ. ಆ ದೇಶದಲ್ಲಿ ನಿಗದಿಯಾಗಿದ್ದ ಆಷಸ್ ಸರಣಿಯಲ್ಲಿ ಯಶಸ್ಸು ಪಡೆಯುವುದು ನಮ್ಮ ಗುರಿಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆ ಚೆಂಡುಗಳನ್ನು ಬಳಕೆಗೆ ತಂದಿದ್ದೆವು. ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ. ಹೀಗಾಗಿ ಡ್ಯೂಕ್ಸ್ ಚೆಂಡುಗಳ ಬಳಕೆಯನ್ನು ಕೈಬಿಡಲು ಮುಂದಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಪೀಟರ್ ರೋಚ್ ತಿಳಿಸಿದ್ದಾರೆ.
ಡ್ಯೂಕ್ಸ್ ಚೆಂಡುಗಳನ್ನು ಬಳಸಲು ಆರಂಭ ಮಾಡಿದ ನಂತರ ಶೆಫೀಲ್ಡ್ ಶೀಲ್ಡ್‍ನಲ್ಲಿ ನಮ್ಮ ಸ್ಪಿನ್ನರ್‍ಗಳು ಯಶಸ್ಸು ಕಾಣುತ್ತಿಲ್ಲ. ಸ್ಪಿನ್ನರ್‍ಗಳ ಹಿತ ಕಾಯುವುದು ನಮ್ಮ ಕರ್ತವ್ಯ. ನಮ್ಮ ನಿರ್ಧಾರಕ್ಕೆ ಇದು ಕೂಡ ಮುಖ್ಯ ಕಾರಣ ಎಂದೂ ಅವರು ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರಕ್ಕೆ ಡ್ಯೂಕ್ಸ್ ಕ್ರಿಕೆಟ್ ಕಂಪನಿ ಮಾಲೀಕ ದಿಲೀಪ್ ಜಜೋಡಿಯಾ ಬೇಸರ ವ್ಯಕ್ತಪಡಿಸಿದ್ದಾರೆ.








