ಬೆಂಗಳೂರು: ಗೃಹ ಇಲಾಖೆಯಲ್ಲಿ ನನ್ನ ಬಿಟ್ಟು ಯಾರ ಹಸ್ತಕ್ಷೇಪವೂ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G. Parameshwara) ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(FSL) ಕಳುಹಿಸಿ ಪರಿಶೀಲನೆ ನಡೆಸುತ್ತೇವೆ. ಮಹಜರು ನಡೆಸಲು ಅನುಮತಿ ನೀಡುವಂತೆ ಪೊಲೀಸರು ಕೇಳಿದ್ದಾರೆ. ಸಭಾಪತಿಗಳು ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಇಲ್ಲವೋ ಎಂಬುವುದು ಕುಮಾರಸ್ವಾಮಿಗೆ ಗೊತ್ತಿದೆ. ಯಾರೂ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು ಏನು ಮಾಡಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಯಾರು ನಿರ್ದೇಶನ ಕೊಟ್ಟಿದ್ದರು ಅಂತ ನೇರವಾಗಿ ಹೇಳಿದರೆ ನಾವೇ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಒಂದು ಕಡೆ ಸದನಲ್ಲಿ ಆಗಿದ್ದು ಮತ್ತೊಂದು ಕಡೆ ಕಾನೂನಿನ ವಿಚಾರ. ಗಲಾಟೆ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಅವರನ್ನ ಬಿಟ್ಟು ಏನು ಬೇಕಾದರೂ ಮಾಡಿಕೊಳ್ಳಲಿ ಅಂತ ಬಿಟ್ಟಿಲ್ಲ. ಬಿಜೆಪಿಯ ಒಬ್ಬೊಬ್ಬರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಈ ಬೆಳವಣಿಗೆಯಲ್ಲಿ ಎನ್‌ಕೌಂಟರ್ ಮಾಡುವ ವಿಚಾರವೇ ಇಲ್ಲ ಎಂದಿದ್ದಾರೆ.