ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ದೆಹಲಿಯಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ – ಸಿಎಂ ಕೇಜ್ರಿವಾಲ್
ಹೊಸದಿಲ್ಲಿ, ಅಗಸ್ಟ್16: ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗುವವರೆಗೂ ದೆಹಲಿಯಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ವೈರಲ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿಯ ಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್‌ನಿಂದ ಮುಚ್ಚಲಾಗಿದೆ.
ನಾನು ಅನೇಕ ಪೋಷಕರೊಂದಿಗೆ ಮಾತನಾಡಿದ್ದೇನೆ, ದಯವಿಟ್ಟು ಶಾಲೆಗಳನ್ನು ತೆರೆಯಬೇಡಿ ಎಂದು ಅವರು ವಿನಂತಿಸಿದ್ದಾರೆ. ನಾವು ಕೊರೋನವೈರಸ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸದ ಹೊರತು ಶಾಲೆಗಳನ್ನು ತೆರೆಯುವುದಿಲ್ಲ ಎಂದು ನಾನು ನಿಮ್ಮೆಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ಮಕ್ಕಳ ಸುರಕ್ಷತೆ ನಮಗೆ ಬಹಳ ಮುಖ್ಯವಾಗಿದೆ, ಎಂದು ಕೇಜ್ರಿವಾಲ್ ದೆಹಲಿ ಸಚಿವಾಲಯದಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದರು.
ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಉನ್ನತ ತರಗತಿಗಳ ಶಾಲೆಗಳು ಹಂತಹಂತವಾಗಿ ಪ್ರಾರಂಭವಾಗಬಹುದು ಎಂದು ಕೇಂದ್ರ ಭಾವಿಸಿದರೆ, ಇತ್ತೀಚಿನ ಸಮೀಕ್ಷೆಯ ಪ್ರಕಾರ ದೆಹಲಿ-ಎನ್‌ಸಿಆರ್‌ನಲ್ಲಿ 61% ರಷ್ಟು ಪೋಷಕರು ಸೆಪ್ಟೆಂಬರ್‌ನಲ್ಲಿ ಶಾಲೆಗಳು ಮತ್ತೆ ತೆರೆಯಲು ಬಯಸುವುದಿಲ್ಲ. ಇದಲ್ಲದೆ, ಸೋಂಕಿನ ಪ್ರಕರಣಗಳು ಸುಮಾರು ಹದಿನೈದು ದಿನಗಳವರೆಗೆ ಇಳಿಕೆ ಕಂಡ ನಂತರ ಇದೀಗ ಪುನಃ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಶನಿವಾರ 1,276 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದೆ.