ನವದೆಹಲಿ: ರಾಷ್ಟ್ರದಲ್ಲಿ ಔಷಧ ಹಾಗೂ ರಸಗೊಬ್ಬರ ದಾಸ್ತಾನು ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. “ನೋವು ನಿವಾರಕ ಪ್ಯಾರಾಸೆಟಮೊಲ್, ಆಯಂಟಿ ಬಯೋಟಿಕ್ ಅಜಿತ್ರೋಮೈಸಿನ್, ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಹಾಗೂ ಅವನ್ನು ತಯಾರಿಸಲು ಬೇಕಾಗುವ ಮೂಲ ರಾಸಾಯನಿಕಗಳು ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನು ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳಿಗೆ ಔಷಧ ಹಾಗೂ ರಾಸಾಯನಿಕ ಸಾಗಣೆ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕ ಹೊಂದಿ ಕ್ರಮ ಕೈಗೊಳ್ಳುತ್ತಿದೆ. ಜನೌಷಧಿ ಕೇಂದ್ರಗಳ ಔಷಧ ಸರಬರಾಜು ವ್ಯವಸ್ಥೆ ಕೂಡ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಗುರುಗ್ರಾಮ ಹಾಗೂ ಗುವಾಹಟಿಗಳಲ್ಲಿರುವ ಔಷಧ ಗೋದಾಮುಗಳಿಂದ ವಿಶೇಷ ಸರಕು ವಾಹನಗಳಲ್ಲಿ ಸರಬರಾಜು ಚುರುಕುಗೊಳಿಸಲಾಗಿದೆ. ಕೆಲವು ಔಷಧಿಯನ್ನು ನೇರವಾಗಿ ಕಾರ್ಖಾನೆಗಳಿಂದಲೇ ಅಗತ್ಯವಿರುವಡೆ ಕಳುಹಿಸಲಾಗುತ್ತಿದೆ. ಸಾಗಣೆ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ಹಾಗೆಯೇ ಸಹಾಯವಾಣಿ 011-23389840 ಕೂಡ ಸ್ಥಾಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.








