ಒಬ್ಬ ವಿದ್ಯಾರ್ಥಿಗೂ ಸೋಂಕು ತಗುಲಬಾರದು – ಸುಧಾಕರ್ ಸೂಚನೆ
ಬೆಂಗಳೂರು, ಜೂನ್ 25: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಒಬ್ಬ ವಿದ್ಯಾರ್ಥಿಗೂ ಕೊರೋನಾ ಸೋಂಕು ತಗುಲದಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಇಡೀ ದೇಶವೇ ಎದುರು ನೋಡುತ್ತಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಜಾಗರೂಕತೆಯಿಂದ ಪರೀಕ್ಷೆಯನ್ನು ನಡೆಸಬೇಕು. ರಾಜ್ಯದಲ್ಲಿ 2879 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಯಾವುದೇ ಗೊಂದಲಗಳಿಗೆ ಅವಕಾಶಗಳಿಲ್ಲದಂತೆ ಸರ್ಕಾರ ನೀಡಿರುವ ಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದ್ದಾರೆ.
ತನ್ನ ತಂದೆ, ಪತ್ನಿ ಮತ್ತು ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂ ಹೋಂ ಕ್ವಾರಂಟೈನ್ ನಲ್ಲಿರುವ ಸಚಿವ ಸುಧಾಕರ್ ತಮ್ಮ ನಿವಾಸದಿಂದಲೇ ವಿಡಿಯೋ ಸಂವಾದ ನಡೆಸಿ ಕೋವಿಡ್ – 19 ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವರು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಪರೀಕ್ಷೆ ಬರೆಯಲು ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದು ಮನೆಗೆ ಹಿಂತಿರುಗುವ ವರೆಗೆ ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮನ್ವಯದಿಂದ ನಿರ್ವಹಿಸಬೇಕು.
ಮಕ್ಕಳನ್ನು ಕರೆತರುವ ವಾಹನ, ಪರೀಕ್ಷಾ ಕೇಂದ್ರಗಳ ಬಳಿ, ಪರೀಕ್ಷಾ ಕೊಠಡಿ, ಶೌಚಾಲಯ ಇತ್ಯಾದಿ ಸ್ಥಳಗಳನ್ನು ಸ್ಯಾನಿಟೈಸ್ ಮಾಡಬೇಕು ಮತ್ತು ಪ್ರತಿ ವಿದ್ಯಾರ್ಥಿ ಗೆ ಮಾಸ್ಕ್ ನೀಡುವುದರ ಜೊತೆಗೆ ಪರೀಕ್ಷೆ ಬರೆಯುವ ಕೊಠಡಿಯಲ್ಲೂ ಸಾಮಾಜಿಕ ಅಂತರ ಇರುವಂತೆ ನೋಡಿಕೊಳ್ಳಬೇಕು ಎಂದರು. ಬೆಳಗ್ಗೆ 7.30 ಕ್ಕೆ ಬರುವುದರಿಂದ ಪರೀಕ್ಷೆ ಬರೆದು ಹಿಂದಿರುಗುವ ವರೆಗೆ ಯಾವುದೇ ಮಗು ಹಸಿವಿನಿಂದ ಬಳಲದಂತೆ ಪ್ರತಿಯೊಬ್ಬರಿಗೂ ಚಿಕ್ಕ ಬಿಸ್ಕೆಟ್ ಪ್ಯಾಕ್ ನೀಡಬೇಕು. ಇದಕ್ಕಾಗಿ ಹಣವನ್ನು ಜಿಲ್ಲಾಡಳಿತದಿಂದ ಭರಿಸುವಂತೆ ಸೂಚಿಸಿದ್ದಾರೆ.
ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ನಡೆಸಿ ಕೊಠಡಿಯೊಳಗೆ ಬಿಡಬೇಕು. ಜ್ವರ ಸೇರಿದಂತೆ ಯಾವುದೇ ಸೋಂಕುಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಕ್ರಮ ಕೈಗೊಳ್ಳುವಂತೆ ಸುಧಾಕರ್ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲ ಪೋಷಕರು ಆತಂಕಗಳಿಗೆ ಒಳಗಾಗದಂತೆ ಜಿಲ್ಲಾಡಳಿತಗಳು ಮಾಧ್ಯಮಗಳ ಮೂಲಕ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು ಎಂದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 458 ಕ್ವಾರಂಟೈನ್ ಪ್ರದೇಶಗಳಿದ್ದು, ಅಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ಹೆಚ್ಚಿನ ಪ್ರಮಾಣದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆ ಮಕ್ಕಳಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಪರೀಕ್ಷಾಕೇಂದ್ರದ ಬಳಿಯಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತಿರದ ಕೋವಿಡ್ ಕೇರ್ ಸೆಂಟರ್ಗಳಿಗೆ ಕರೆದೊಯ್ದು ಪರೀಕ್ಷೆ ನಡೆಸಬೇಕು. ಅದಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಡಿಯೋ ಸಂವಾದದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ಕುಮಾರ್, ಬಿಬಿಎಂಪಿ ಉಸ್ತುವಾರಿ ಮಂಜುನಾಥ್, ನಿರ್ದೇಶಕಿ ಸುಮಂಗಲ, ತಜ್ಞರಾದ ಡಾ. ಸುದರ್ಶನ್, ಡಾ. ಗಿರಿಬಾಬು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್, ‘ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ SSLC ಪರೀಕ್ಷೆ ಪ್ರಮುಖ ಮೈಲಿಗಲ್ಲು. ಇದಕ್ಕಾಗಿಯೇ, ಸವಾಲುಗಳ ನಡುವೆಯೇ, ಮಕ್ಕಳ ಸುರಕ್ಷತೆಗೆ ಮತ್ತು ಸುಗಮವಾಗಿ ಪರೀಕ್ಷೆ ನಡೆಸಲು ರಾಜ್ಯಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ನಿಮ್ಮ ಮಕ್ಕಳು ನಿರಾತಂಕದಿಂದ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬಿ, ಸಹಕರಿಸಿ. ಗುಡ್ ಲಕ್ ಮಕ್ಕಳೇ!’ ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ.