ಬೆಳಗಾವಿ: ರಾಜ್ಯದಲ್ಲಿ ಮದ್ಯ ಮಾರಾಟದ ಕುರಿತು ಸಾರ್ವಜನಿಕ ವಲಯದಲ್ಲಿ ಹಾಗೂ ವಿರೋಧ ಪಕ್ಷಗಳಿಂದ ಕೇಳಿಬರುತ್ತಿದ್ದ ಹಲವು ಪ್ರಶ್ನೆಗಳಿಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಸುವರ್ಣ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ ಇಂತಿಷ್ಟೇ ಪ್ರಮಾಣದ ಮದ್ಯವನ್ನು ಮಾರಾಟ ಮಾಡಲೇಬೇಕೆಂಬ ಯಾವುದೇ ಗುರಿಯನ್ನು (Target) ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುವಾಗ ಸಚಿವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.
ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯದ ಹಾವಳಿ
ಶಾಸಕ ಸುರೇಶ್ ಬಾಬು ಅವರು ಸರ್ಕಾರದ ಗಮನ ಸೆಳೆಯುತ್ತಾ, ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಹಳ್ಳಿಗಳ ವಯಸ್ಕರು ಮಾತ್ರವಲ್ಲದೆ, ಮಕ್ಕಳೂ ಕೂಡ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಒಂದೆಡೆ ಸರ್ಕಾರ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರ ಪರ ಎಂದು ಹೇಳಿಕೊಳ್ಳುತ್ತಿದೆ. ಆದರೆ ಮತ್ತೊಂದೆಡೆ, ಹಳ್ಳಿಗಳಲ್ಲಿನ ಈ ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರ ಬದುಕು ದುಸ್ತರವಾಗುತ್ತಿದೆ. ಗೃಹಲಕ್ಷ್ಮಿಯಂತಹ ಯೋಜನೆಗಳಿಂದ ಸಿಗುವ ಹಣವೂ ಪರೋಕ್ಷವಾಗಿ ಮದ್ಯಕ್ಕೆ ಬಳಕೆಯಾಗುವಂತಾ ಪರಿಸ್ಥಿತಿ ಇದೆ ಎಂದು ಅವರು ಸದನದ ಗಮನಕ್ಕೆ ತಂದರು. ಹೆಚ್ಚಿನ ಆದಾಯ ಸಂಗ್ರಹಿಸುವ ಸಲುವಾಗಿ ಇಲಾಖೆಗೆ ಮಾರಾಟದ ಗುರಿ ನಿಗದಿಪಡಿಸುವುದನ್ನು ಬಿಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಮದ್ಯ ಮಾರಾಟದ ಗುರಿಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದರು. ರಾಜ್ಯದಲ್ಲಿ ಇಂತಿಷ್ಟೇ ಪ್ರಮಾಣದ ಮದ್ಯವನ್ನು ನಿಗದಿತ ಅವಧಿಯಲ್ಲಿ ಮಾರಾಟ ಮಾಡಲೇಬೇಕು ಎಂಬ ಯಾವುದೇ ಟಾರ್ಗೆಟ್ ಅನ್ನು ಅಬಕಾರಿ ಇಲಾಖೆಗೆ ನೀಡಿಲ್ಲ. ಆದರೆ, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಇಂತಿಷ್ಟು ಪ್ರಮಾಣದ ಆದಾಯ ಲಭ್ಯವಾಗಬಹುದು ಎಂಬ ಆರ್ಥಿಕ ನಿರೀಕ್ಷೆಯನ್ನು (Revenue Expectation) ಮಾತ್ರ ಹೊಂದಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದ ಸಚಿವರು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹಗಲು ರಾತ್ರಿ ಕಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಅಬಕಾರಿ ಇಲಾಖೆ ಕೈಗೊಂಡ ಕ್ರಮಗಳ ಅಂಕಿ-ಅಂಶಗಳನ್ನು ಸಚಿವರು ಸದನದಲ್ಲಿ ಮಂಡಿಸಿದರು:
ಒಟ್ಟು ಅಬಕಾರಿ ದಾಳಿಗಳು: 721
ದಾಖಲಾದ ಪ್ರಕರಣಗಳು: 491
ಬಂಧಿತರ ಸಂಖ್ಯೆ: 448
ವಶಪಡಿಸಿಕೊಂಡ ಅಕ್ರಮ ಮದ್ಯ: 641 ಲೀಟರ್
ಜಪ್ತಿ ಮಾಡಿದ ವಾಹನಗಳು: 16
ವಿಧಿಸಲಾದ ದಂಡ: 12.69 ಲಕ್ಷ ರೂ.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟವನ್ನು ತಡೆಗಟ್ಟಲು ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಸಚಿವ ತಿಮ್ಮಾಪುರ ಇದೇ ವೇಳೆ ಭರವಸೆ ನೀಡಿದರು.








