ಬೆಂಗಳೂರು, ಮೇ 29 : ಬಿಜೆಪಿ ಅತೃಪ್ತ ಶಾಸಕರು ರಹಸ್ಯ ಸಭೆ ನಡೆಸಿದ್ದು, ರಾಜ್ಯ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿಯ ಆಂತರಿಕ ಬೆಳವಣಿಗೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಇಂದು ಕಿತ್ತಾಡುತ್ತಾರೆ ನಾಳೆ ಎಲ್ಲರೂ ಒಂದಾಗುತ್ತಾರೆ. ಅವರ ವಿಚಾರಗಳೆಲ್ಲಾ ನನಗೆ ತಿಳಿದಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರು ನಿಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಬಿಜೆಪಿಯವರು ಮಾಡುತ್ತಿರುವುದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಬಿಜೆಪಿಯ ಯಾವ ಶಾಸಕರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇನ್ನು ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಶಾಸಕರಾದ ಬಸನಗೌಡ ಪಾಟೀಲ್, ರಾಜುಗೌಡ, ದತ್ತಾತ್ರೇಯ ಪಾಟೀಲ್, ಬಾಲಚಂದ್ರ ಜಾರಕಿಹೊಳಿ ಗೌಪ್ಯ ಸಭೆ ಸೇರಿದ್ದರು. ಈ ವೇಳೆ ಸಿಎಂ ಬಿ.ಎಸ್ ವೈ ವಿರುದ್ಧ ಹೈ ಕಮಾಂಡ್ ಗೆ ದೂರು ನೀಡುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.








