
ನವದೆಹಲಿ : ಹೆಮ್ಮಾರಿ ಕೊರೊನಾ ವೈರಸ್ ನಿಂದ ನಲುಗಿ ಹೋಗಿರುವ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಿಪರೀತ ತಾಪಮಾನದಿಂದ ಜನರು ತತ್ತರಿಸಿ ಹೋಗಿದ್ದಾರೆ. ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಡ ಮತ್ತು ರಾಜಸ್ತಾನದಲ್ಲಿ ಉಷ್ಣಾಂಶ 45 ಡಿಗ್ರಿ ದಾಟಿದ್ದು, ಮುಂದಿನ ಎರಡು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ ರಾಜ್ಯಗಳಲ್ಲಿ ಬಿಸಿ ಗಾಳಿ ಅಧಿಕವಾಗಿದೆ. ಹೀಗಾಗಿ, ಈ 5 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಕೂಡ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇನ್ನೆರಡು ದಿನಗಳ ಕಾಲ ಬಿಸಿ ಗಾಳಿ ಬೀಸಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
ಅಲ್ಲದೆ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆಯಿಂದ ಬಿಸಿಯಾದ ತಾಪಮಾನದ ಕಾರಣಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ‘ಈ ಬಾರಿ ಉತ್ತರ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಮಳೆಯಾದ ಕಾರಣ ತಾಪಮಾನ ಸಾಮಾನ್ಯವಾಗಿತ್ತು. ಆದರೆ ಶನಿವಾರ ರಾಜಸ್ತಾನದ ಪಿಲಣಿಯಲ್ಲಿ 46.7 ಡಿಗ್ರಿ ಉಷ್ಣಾಂಶ ದಾಖಲಾಗಿದೆ,’ ಎಂದು ಶ್ರೀವಾಸ್ತವ ಅವರು ಹೇಳಿದರು.
ಕರ್ನಾಟಕದಲ್ಲೂ ಬೀಸಲಿದೆ ಬಿಸಿಗಾಳಿ
ಉತ್ತರ ಭಾರತದ ರಾಜ್ಯಗಳಲ್ಲಿ ಅಲ್ಲದೇ ಚತ್ತೀಸಗಡ, ಒಡಿಶಾ, ಗುಜರಾತ್, ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭ, ಆಂಧ್ರಪ್ರದೇಶದ ಕರಾವಳಿ ಭಾಗ, ಯಾಣ, ರಾಯಲಸೀಮಾ ಮತ್ತು ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳ ಅಲ್ಲಲ್ಲಿ ಮುಂದಿನ 3-4 ದಿನಗಳಲ್ಲಿ ಬಿಸಿಗಾಳಿಯ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








