ಬೆಂಗಳೂರು : ರಾಜ್ಯ ಸರ್ಕಾರ ಕೊರೊನಾ ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದರು. ಈ ಹಿನ್ನೆಲೆ ಕಾಂಗ್ರೆಸ್ ಆರೋಪದ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಪ್ರತಿಕ್ರಿಯೆ ನೀಡಿ, ಆರೋಗ್ಯ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಅವ್ಯವಹಾರವಾಗಿಲ್ಲ ಎಂದು ಪುನರುಚ್ಛರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಕಳೆದ ಬಾರಿ ಆರೋಗ್ಯ ಇಲಾಖೆ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ನಾನು ಉತ್ತರ ಕೊಡುವ ಕೆಲಸ ಮಾಡಿದ್ದೇನೆ. ಇವಾಗ ಆರೋಗ್ಯ ಇಲಾಖೆ 750 ಕೋಟಿ ಖರ್ಚು ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ನಾವು ಖರ್ಚು ಮಾಡಿರೋದೇ ಬರೀ 290 ಕೋಟಿ ಮಾತ್ರ ಎಂದರು.
ಇನ್ನು ದುಪ್ಪಟ್ಟು ಹಣ ಕೊಟ್ಟು ಕೊರೊನಾ ಸಾಮಗ್ರಿಗಳನ್ನು ಖರೀದಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉಪಕರಣಗಳ ಡಿಮ್ಯಾಂಡ್ ಇದ್ದಂತ ಸಂದರ್ಭದಲ್ಲಿ ಬೆಲೆ ಏರು ಪೇರು ಆಗಿರಬಹುದು. ಆರೋಗ್ಯ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಅವ್ಯವಹಾರ ಆಗಿಲ್ಲ. ಈ ಮಾತನ್ನು ಅವತ್ತು ಹೇಳಿದ್ದೇನೆ, ಇವತ್ತು ಅದನ್ನೇ ಹೇಳ್ತಿದ್ದೇನೆ ಅಂತ ಶ್ರೀರಾಮುಲು ಹೇಳಿದ್ದಾರೆ.








