ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರ ಸುದೀರ್ಘ ಅವಧಿಯ ಅಧಿಕಾರಾವಧಿಯ ದಾಖಲೆಯನ್ನು ಮುರಿದು, ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವ್ಯಂಗ್ಯಭರಿತವಾಗಿ ಶುಭಕೋರಿದ್ದಾರೆ. ಇದೇ ವೇಳೆ ಅರಸು ಮತ್ತು ಸಿದ್ದರಾಮಯ್ಯ ಅವರ ಆಡಳಿತ ಶೈಲಿಯನ್ನು ಹೋಲಿಕೆ ಮಾಡಿ, ದಾಖಲೆ ಸರಿಗಟ್ಟಿದವರೆಲ್ಲ ಇತಿಹಾಸ ಬರೆಯುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವಿಜಯೇಂದ್ರ, ಸಿದ್ದರಾಮಯ್ಯನವರು ಕೇವಲ ಅಧಿಕಾರಾವಧಿಯ ಅಂಕಿ-ಅಂಶಗಳಲ್ಲಿ ಅರಸು ಅವರನ್ನು ಮೀರಿಸಿದ್ದಾರೆಯೇ ಹೊರತು, ಸಾಧನೆಯಲ್ಲಿ ಅವರ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
ಕುರ್ಚಿ ಉಳಿಸಿಕೊಳ್ಳುವ ಹೆಣಗಾಟ
ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಹೊಸ ತಲೆಮಾರಿನ ನಾಯಕರನ್ನು ಬೆಳೆಸಿದರು. ಆದರೆ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಅರಸು ಅವರು ಎಂದಿಗೂ ಅಧಿಕಾರ ಉಳಿಸಿಕೊಳ್ಳಲು ಇತರರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಿಲ್ಲ. ಅಧಿಕಾರದಲ್ಲಿ ಇರುವುದಕ್ಕೂ, ಅಧಿಕಾರ ನಡೆಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ದೂರದೃಷ್ಟಿ ಮತ್ತು ಮತದೃಷ್ಟಿ
ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ ಶಾಶ್ವತವಾದ ಬದಲಾವಣೆ ತಂದಿತು. ಅವರು ಚುನಾವಣೆ ಗೆಲ್ಲಲು ರಾಜ್ಯದ ಬೊಕ್ಕಸ ಬರಿದು ಮಾಡುವ ಗ್ಯಾರಂಟಿಗಳನ್ನು ಘೋಷಿಸಲಿಲ್ಲ. ಅರಸು ಅವರದ್ದು ದೂರದೃಷ್ಟಿಯಾಗಿದ್ದರೆ, ಸಿದ್ದರಾಮಯ್ಯನವರದ್ದು ಕೇವಲ ಮತದೃಷ್ಟಿ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ದೇವರಾಜು ಅರಸು ಅವರು ಬಡವರಿಗೆ ಭೂಮಿ ನೀಡಿದರೇ ವಿನಃ, ಅಕ್ರಮ ವಲಸಿಗರಿಗೆ ಭೂಮಿ ನೀಡಲು ಮುಂದಾಗಲಿಲ್ಲ. ಅವರು ಎಂದಿಗೂ ಹಗರಣದಲ್ಲಿ ಸಿಲುಕಿ ನಿವೇಶನಗಳನ್ನು ಹಿಂದಿರುಗಿಸುವ ಮುಜುಗರಕ್ಕೆ ಒಳಗಾಗಲಿಲ್ಲ. ಅರಸು ಅವರು ಪ್ರಧಾನಿ ಇಂದಿರಾ ಗಾಂಧಿಯವರ ಎದುರು ರಾಜ್ಯದ ಹಿತಕ್ಕಾಗಿ ಎದೆಯುಬ್ಬಿಸಿ ನಿಂತಿದ್ದರು. ಆದರೆ ಇಂದಿನ ಸರ್ಕಾರ ದೆಹಲಿಯ ಹೈಕಮಾಂಡ್ ನ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಸ್ವಾಭಿಮಾನಕ್ಕೂ ಮತ್ತು ಶರಣಾಗತಿಗೂ ಹೋಲಿಕೆ ಮಾಡಲು ಸಾಧ್ಯವೇ ಎಂದು ವಿಜಯೇಂದ್ರ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಜಾತಿ ರಾಜಕೀಯದ ವಿರುದ್ಧ ಕಿಡಿ
ಅರಸು ಅವರು ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಅವರನ್ನು ಮೇಲೆತ್ತಲು ರಾಜಕೀಯ ಮಾಡಿದರು. ಆದರೆ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಏಳಿಗೆಗಾಗಿ ಜಾತಿ ಜನಗಣತಿಯ ವರದಿ ಹಿಡಿದು ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಅಹಿಂದ ವರ್ಗಗಳನ್ನು ಬಳಸಿಕೊಂಡು ಮೇಲೆ ಬರುವುದಕ್ಕೂ, ಆ ವರ್ಗಗಳನ್ನು ಮೇಲೆ ತರುವುದಕ್ಕೂ ವ್ಯತ್ಯಾಸವಿದೆ ಎಂದು ವಿಜಯೇಂದ್ರ ಮಾರ್ಮಿಕವಾಗಿ ನುಡಿದಿದ್ದಾರೆ.
ಅರಸು ಅವರ ಸೈದ್ಧಾಂತಿಕ ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ, ಅವರ ದಿಟ್ಟತನ ಮತ್ತು ಜನಪರ ಕಾಳಜಿಯನ್ನು ಎಲ್ಲರೂ ಮೆಚ್ಚುತ್ತಾರೆ. ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತ, ಆ ಸ್ಥಾನದಲ್ಲಿ ಕುಳಿತು ಏನು ಮಾಡಿದರು ಎನ್ನುವುದು ಮುಖ್ಯ. ಗಾತ್ರಕ್ಕಿಂತ ಗುಣ ಮುಖ್ಯ ಎನ್ನುವಂತೆ, ಸುದೀರ್ಘ ಕಾಲಕ್ಕಿಂತ ಶಾಶ್ವತ ಸಾಧನೆ ಮುಖ್ಯ ಎಂದು ಹೇಳುವ ಮೂಲಕ, ಸಿದ್ದರಾಮಯ್ಯನವರ ದಾಖಲೆಯ ಸಾಧನೆಯನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ.








