ಮಧ್ಯ ಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಅವರು ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ ಕಮಲ್ ನಾಥ್ ಅವರು, ಮೂರು ಪುಟಗಳ ಪತ್ರವೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಬಿಜೆಪಿ ತನ್ನ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ರಾಜ್ಯದಲ್ಲಿಲ್ಲ. ರಾಜಕಾರಣದಲ್ಲಿದೆ ಎಂದು ತಿಳಿಸಿದರು. ಅಲ್ಲದೆ ಸೋಮವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ನನ್ನ ಸರ್ಕಾರ ವಿಶ್ವಾಸಮತ ಯಾಚಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಇನ್ನು ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿರುವ ಸಿಎಂ ಕಮಲ್ ನಾಥ್ ಅವರು, ನನ್ನ ಸರ್ಕಾರ ಅಸ್ಥಿರಗೊಳಿಸುವುದಕ್ಕಾಗಿ 19 ಕಾಂಗ್ರೆಸ್ ಶಾಸಕರನ್ನು ಅಪಹರಿಸಿ, ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಇತ್ತ ಆಡಳಿತಾರೂಢ ಕಾಂಗ್ರೆಸ್ ಮಾಡಿರುವ ಆರೋಪವನ್ನು ಪ್ರತಿಪಕ್ಷ ಬಿಜೆಪಿ ತಳ್ಳಿಹಾಕಿದೆ.
ಒಟ್ಟಾರೆ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರ ಆಪ್ತರಾಗಿರುವ 19 ಮಂದಿ ಶಾಸಕರು ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಅವರಿಗೆ ಸಲ್ಲಿಸಲಿದ್ದಾರೆ. ಈ ನಡುವೆ ಕಮಲ್ ನಾಥ್ ರಾಜ್ಯಪಾಲರನ್ನು ಭೇಟಿ ಮಾಡಿರುವುದು ಮಧ್ಯಪ್ರದೇಶ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.









