ಎಲ್ಲಾ ಗೂಡಾರ್ಥದಲ್ಲಿದೆ ಎಂದಿದ್ದೇಕೆ ಯತ್ನಾಳ್..!
ವಿಜಯಪುರ: ಮಕರ ಸಂಕ್ರಮಣದಲ್ಲಿ ಐತಿಹಾಸಿಕವಾಗಿ ಬದಲಾವಣೆಗಳು ಆಗಲಿವೆ. ಸಂಕ್ರಮಣದ ಬಳಿಕ ಉತ್ತರಾಯಣ ಕಾಲ. ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆಯಾಗುತ್ತೋ ಗೊತ್ತಿಲ್ಲ, ಆದ್ರೆ, ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಎಲ್ಲವೂ ಗೂಡಾರ್ಥವಿದೆ, ಇದೆಲ್ಲದಕ್ಕೂ ಮಕರ ಸಂಕ್ರಮಣದಲ್ಲಿ ಐತಿಹಾಸಿಕವಾಗಿ ಬದಲಾವಣೆಗಳು ಆಗಲಿವೆ. ಎಲ್ಲದಕ್ಕೂ ನನಗೆ ವಿಶ್ವಾಸವಿದೆ. ಕೇಂದ್ರ ಹೈಕಮಾಂಡ್ ಒಳ್ಳೆಯ ನಿರ್ಣಯ ನೂರಕ್ಕೆ 100ರಷ್ಟು ತೆಗೆದುಕೊಳ್ಳುತ್ತಾರೆ. ವಿಜಯಪುರಕ್ಕೆ ಆಗಿರುವ ಅನ್ಯಾಯಕ್ಕೆ ಸಂಪೂರ್ಣ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿ ಮತ್ತೆ ಬಿಜೆಪಿ ಪಾಳಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.
ಸಿಎಂ ಆಗುವ ಕನಸು ಬಿಚ್ಚಿಟ್ಟ ಯತ್ನಾಳ..!
ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಯಾರದ್ದು ಏನಾಗುತ್ತೋ ಯಾರಿಗೂ ಗೊತ್ತು. ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು, ಆಗಬಾರದು ಅಂತೆಲ್ಲಿದೆ? ಎಂದು ಹೇಳುವ ಮೂಲಕ ತಾವು ಸಿಎಂ ಆಗುವ ಇಚ್ಛೆಯನ್ನು ಮತ್ತೊಮ್ಮ ವ್ಯಕ್ತಪಡಿಸಿದ್ದಾರೆ.
ಶಾಲೆಗಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ
ಶಾಲೆಗಳ ಆರಂಭ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದ್ರೂ ನಾವು ಸಹಿಸಿಕೊಳ್ಳಬಹುದು. ಆದರೆ ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ನಾಲ್ಕೈದರಿಂದ ಹತ್ತರವರೆಗೆ ಮಕ್ಕಳಿರುತ್ತಿದ್ದವು. ಇಂದಿನ ಕಾಲದಲ್ಲಿ ಒಂದೋ, ಎರಡೋ ಮಕ್ಕಳು ಮಾತ್ರ ಇವೆ. ಹೀಗಾಗಿ ಪಾಲಕರು ಅತ್ಯಂತ ಜೋಪಾನವಾಗಿ ಮಕ್ಕಳನ್ನು ಬೆಳೆಸಿರ್ತಾರೆ. ಕೋವಿಡ್ ನಿಂದ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ವೈದ್ಯರಿಂದ, ಹಾಗೂ ಎಲ್ಲರ ಮಾಹಿತಿ ತೆಗೆದುಕೊಂಡು ನಿರ್ಣಯ ಮಾಡಬೇಕು.
ಅವಸರ ಮಾಡುವ ಅವಶ್ಯಕತೆ ಇಲ್ಲ, ಆ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ರಾತ್ರಿ ಕರ್ಫ್ಯೂ ವಾಪಸ್ ಗೆ ಸ್ವಾಗತ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾತ್ರಿ ಕರ್ಫ್ಯೂ ವಾಪಸ್ ತೆಗೆದುಕೊಂಡಿದ್ದು ಸ್ವಾಗತಾರ್ಹ. ಇನ್ನು ಮೇಲೆ ಯಾವುದೇ ನಿರ್ಣಯಗಳನ್ನು ಸಚಿವರ, ಶಾಸಕರ, ಸಾರ್ವಜನಿಕರ ಭಾವನಗೆಳನ್ನು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯಿಸಬೇಕು. ಅದನ್ನು ಬಿಟ್ಟು ಯಾವುದೇ ನಿರ್ಣಯಗಳನ್ನು, ಯಾರದ್ದೋ ಒಬ್ಬರ ಮಾತು ಕೇಳಿ ತೆಗೆದುಕೊಳ್ಳಬಾರದು. ಆರೋಗ್ಯ ಸಚಿವ ಸುಧಾಕರ್ ಅವರ ಮಾತು ಕೇಳಿದ್ದಾರೋ ಅಥವಾ ಬೇರೆ ಯಾರ ಮಾತು ಕೇಳಿದ್ದಾರೋ ಗೊತ್ತಿಲ್ಲ, ಇನ್ಮೇಲೆ ಆ ರೀತಿ ಮಾಡಬಾರದು ಎಂದು ಯತ್ನಾಳ್ ಸಲಹೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel