ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ ಭೇಟಿ ಹಿನ್ನೆಲೆಯಲ್ಲಿ ಕೊಳೆಗೇರಿಗಳು ಕಾಣಿಸದಂತೆ ಬೃಹತ್ ಗೋಡೆಯನ್ನು ನಿರ್ಮಿಸಲಾಗಿತ್ತು. ಗುಜರಾತ್ ಸರ್ಕಾರದ ಈ ಕ್ರಮ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸುಮಾರು 45 ಕೊಳೆಗೇರಿ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ಸರ್ಕಾರ ನೋಟಿಸ್ ನೀಡಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ಫೆ.24ರಂದು ಗುಜರಾತಿನ ಅಹಮದಾಬಾದ್ ನ ಮೊಟೇರಾದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಶ್ವದ ಬಹುದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಟ್ರಂಪ್ ಉದ್ಘಾಟನೆ ಮಾಡಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ‘ಹೌಡಿ ಮೋದಿ’ ರೀತಿಯಲ್ಲಿ ‘ನಮಸ್ತೆ ಟ್ರಂಪ್’ ಎಂದೂ ಹೆಸರಿಡಲಾಗಿದೆ. ಇನ್ನು ಸರ್ದಾರ್ ವಲ್ಲಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಾಗುವ ಮಾರ್ಗದುದ್ದಕ್ಕೂ ಮೆರವಣಿಗೆ ಮೂಲಕ ಟ್ರಂಪ್ ದಂಪತಿಗೆ ಅದ್ಧೂರಿ ಸ್ವಾಗತ ಮಾಡಲಾಗುತ್ತದೆ. ಇದೇ ಮಾರ್ಗದ ಮಧ್ಯೆ ದೇವ್ ಸರಣ್ ಹೆಸರಿನ ಕೊಳಗೇರಿ ಪ್ರದೇಶವಿದ್ದು, ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ನೋಟಿಸ್ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.








