ಈ ಮೂವರು ತ್ರಿಮೂರ್ತಿಗಳ ಮನೆಯಲ್ಲಿ ರಾರಾಜಿಸುತ್ತಿವೆ ಬರೋಬ್ಬರಿ 60 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು..!
ಆಸ್ಟ್ರೇಲಿಯನ್ ಓಪನ್… ಫ್ರೆಂಚ್ ಓಪನ್.. ವಿಂಬಲ್ಡನ್… ಯುಎಸ್ ಓಪನ್.. ಈ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳು ಟೆನಿಸ್ ಜಗತ್ತಿನ ಪ್ರತಿಷ್ಠಿತ ಟೂರ್ನಿಗಳು. ಪ್ರತಿ ವರ್ಷ ನಡೆಯುತ್ತಿರುವ ಈ ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬ ಟೆನಿಸ್ ಆಟಗಾರನ. ಆಟಗಾರ್ತಿಯರ ಕನಸು.
ಹಾಗಂತ ಈ ಟೂರ್ನಿಗಳಲ್ಲಿ ಹಾಗೇ ಸುಮ್ಮನೆ ಗೆಲ್ಲಲು ಸಾಧ್ಯವಿಲ್ಲ. ಇಲ್ಲಿ ಆಡಬೇಕಾದ್ರೆ ಅರ್ಹತೆ ಬೇಕು. ತಾಳ್ಮೆ ಬೇಕು.. ಬದ್ಧತೆ ಬೇಕು.. ಕೌಶಲ್ಯಗಳು ಬೇಕು.. ಕಠಿಣ ಶ್ರಮ ಪಡಲೇಬೇಕು. ಪ್ರತಿ ಕ್ಷಣ, ಪ್ರತಿ ಸರ್ವ್, ಪ್ರತಿ ಹೊಡೆತಗಳು ಭಿನ್ನ- ವಿಭಿನ್ನವಾಗಿರಬೇಕು.. ಅದಕ್ಕಿಂತಲೂ ಮುಖ್ಯವಾಗಿ ಹೋರಾಟದ ಮನೋಭಾವನೆ, ಆಕ್ರಮಣಕಾರಿ ಪ್ರವೃತ್ತಿ , ಚಾಣಕ್ಷ ನಡೆ ಕೂಡ ಮುಖ್ಯವಾಗಿರುತ್ತದೆ.
ಹೌದು, ಕಳೆದ 18 ವರ್ಷಗಳಿಂದ ಆಧುನಿಕ ಟೆನಿಸ್ ಜಗತ್ತನ್ನು ಆಳಿದ್ದು ಬರೀ ಮೂರು ಜನ ಮಾತ್ರ. ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಅದ್ಭುತ ಆಟಗಾರರು ಬಂದು ಹೋಗಿದ್ದಾರೆ. ಆದ್ರೆ ಈ ಮೂವರು ಆಟಗಾರರು ಮಾತ್ರ ಸದ್ಯದ ಟೆನಿಸ್ ಜಗತ್ತಿನ ತ್ರಿಮೂರ್ತಿಗಳಾಗಿ ಪ್ರಜ್ವಲಿಸುತ್ತಿದ್ದಾರೆ.
ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜಾಕೊವಿಕ್.. ಮೊದಲೇ ಹೇಳಿದ ಹಾಗೇ 18 ವರ್ಷಗಳಿಂದ ಟೆನಿಸ್ ಜಗತ್ತಿನಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಾ ಟೆನಿಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
2003ರಿಂದ ಸುಮಾರು 2010ರವರೆಗೆ ರೋಜರ್ ಫೆಡರರ್ ಉತ್ತುಂಗದಲ್ಲಿದ್ದರು. ಹಾಗೇ ರಫೆಲ್ ನಡಾಲ್ ರೋಜರ್ ಫೆಡರರ್ ಗೆ ಜಿದ್ದಾಜಿದ್ದಿನ ಪೈಪೋಟಿ ನೀಡುತ್ತಾ ಯಶ ಕೂಡ ಸಾಧಿಸುತ್ತಿದ್ದರು. ಆದ್ರೆ 2011ರಿಂದ ನೊವಾಕ್ ಜಾಕೊವಿಕ್ ಅವರು ಫೆಡರರ್ ಮತ್ತು ರಫೆಲ್ ನಡಾಲ್ ಅವರನ್ನು ದಿಟ್ಟ ಸವಾಲು ನೀಡುತ್ತಾ ಅವರ ಸಾಲಿನಲ್ಲಿ ನಿಂತುಕೊಂಡಿದ್ದಾರೆ.
ಇದೀಗ ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ಜಾಕೊವಿಕ್ ಮೂವರು ಕೂಡ ತಲಾ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮುಂದಿನ ದಿನಗಳ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳನ್ನು ಯಾರು ಗೆದ್ದುಕೊಂಡು ಹೋಗುತ್ತಾರೋ ಅವರು ಟೆನಿಸ್ ಜಗತ್ತಿನಲ್ಲಿ ಕಿಂಗ್ ಆಗಿ ಮೆರೆಯುತ್ತಾರೆ.
ಅಂದ ಹಾಗೇ, ಕಳೆದ 18 ವರ್ಷಗಳ 71 ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಲ್ಲಿ 60 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಈ ತ್ರಿಮೂರ್ತಿಗಳ ಮನೆಯಲ್ಲಿ ರಾರಾಜಿಸುತ್ತಿದೆ. ಕೋವಿಡ್ ನಿಂದಾಗಿ ಕಳೆದ ಬಾರಿ ವಿಂಬಲ್ಡನ್ ಟೂರ್ನಿ ನಡೆದಿಲ್ಲ.
ಇನ್ನೊಂದು ವಿಶೇಷತೆ ಅಂದ್ರೆ ಈ ಮೂವರು ಆಟಗಾರರು ಮೂರು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಗರಿಷ್ಠ ಸಂಖ್ಯೆಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ನೊವಾಕ್ ಜಾಕೊವಿಕ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕಿಂಗ್ ಆಗಿ ಮೆರೆದಾಡಿದ್ದಾರೆ. ರಫೆಲ್ ನಡಾಲ್ ಅವರು ಆವೆ ಮಣ್ಣಿನಲ್ಲಿ ನಡೆಯುವ ಫ್ರೆಂಚ್ ಓಪನ್ ಟೂರ್ನಿಯ ಯಶ ಸಾಧಿಸಿದ್ದಾರೆ. ಹಾಗೇ ರೋಜರ್ ಫೆಡರರ್ ಅವರು ಹುಲ್ಲು ಹಾಸಿನ ಅಂಗಣವಾಗಿರುವ ವಿಂಬಲ್ಡನ್ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಜಾಕೊವಿಕ್ 9 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ರೆ, ರಫೆಲ್ ನಡಾಲ್ ಅವರು 13 ಬಾರಿ ಫ್ರೆಂಚ್ ಓಪನ್ ಗೆದ್ದಿದ್ದಾರೆ. ಹಾಗೇ ರೋಜರ್ ಫೆಡರರ್ ಅವರು ಎಂಟು ಬಾರಿ ವಿಂಬಲ್ಡನ್ ಗೆದ್ದುಕೊಂಡಿದ್ದಾರೆ. ಇನ್ನು ಯುಎಸ್ ಓಪನ್ ಟೂರ್ನಿಯಲ್ಲಿ ರೋಜರ್ ಫೆಡರರ್ ಐದು ಬಾರಿ ಹಾಗೂ ನಡಾಲ್ ನಾಲ್ಕು ಬಾರಿ ಗೆದ್ದುಕೊಂಡ್ರೆ, ಜಾಕೊವಿಕ್ ಮೂರು ಬಾರಿ ಗೆದ್ದಿದ್ದಾರೆ.
ಒಟ್ಟಾರೆ, ನೊವಾಕ್ ಜಾಕೊವಿಕ್ ಅವರು 9 ಬಾರಿ ಆಸ್ಟ್ರೇಲಿಯನ್ ಓಪನ್, ಎರಡು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್ ಹಾಗೂ ಮೂರು ಬಾರಿ ಯುಎಸ್ ಓಪನ್ ಗೆದ್ದುಕೊಂಡು ಒಟ್ಟು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದಾರೆ. ಸದ್ಯ 2021ರ ಸಾಲಿನ ಮೂರು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಜಾಕೊವಿಕ್ ಅವರು ಇದೀಗ ಯುಎಸ್ ಓಪನ್ ಟೂರ್ನಿಯತ್ತ ಚಿತ್ತವನ್ನಿಟ್ಟಿದ್ದಾರೆ.
ಇನ್ನು ರೋಜರ್ ಫೆಡರರ್, ಆರು ಬಾರಿ ಆಸ್ಟ್ರೇಲಿಯನ್ ಓಪನ್, ಒಂದು ಬಾರಿ ಫ್ರೆಂಚ್ ಓಪನ್, ಎಂಟು ಬಾರಿ ವಿಂಬಲ್ಡನ್ ಹಾಗೂ ಐದು ಬಾರಿ ಯುಎಸ್ ಓಪನ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದ್ರೆ 2018ರ ಬಳಿಕ ರೋಜರ್ ಫೆಡರರ್ ಅವರಿಗೆ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಹಾಗೇ ರಫೆಲ್ ನಡಾಲ್ – ಒಂದು ಬಾರಿ ಆಸ್ಟ್ರೇಲಿಯನ್ ಓಪನ್, 13 ಬಾರಿ ಫ್ರೆಂಚ್ ಓಪನ್, ಎರಡು ಬಾರಿ ವಿಂಬಲ್ಡನ್ ಮತ್ತು ನಾಲ್ಕು ಬಾರಿ ಯುಎಸ್ ಓಪನ್ ಪ್ರಶಸ್ತಿಗಳು ನಡಾಲ್ ಹೆಸರಿನಲ್ಲಿ ರಾರಾಜಿಸುತ್ತಿವೆ.
ಒಟ್ಟಿನಲ್ಲಿ ರೋಜರ್ ಫೆಡರರ್ ವಯಸ್ಸು 40.. ನಡಾಲ್ ವಯಸ್ಸು 35, ಜಾಕೊವಿಕ್ ವಯಸ್ಸು 34.. ಹೀಗೆ ವಯಸ್ಸಿನ ಆಧಾರದಲ್ಲಿ ನೋಡುವುದಾದ್ರೆ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಗರಿಷ್ಠ ಸಂಖ್ಯೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ, ರೋಜರ್ ಫೆಡರರ್ ಅವರಿಗೆ ವಯಸ್ಸು ಮತ್ತು ಗಾಯ ಅಡ್ಡಿಯನ್ನುಂಟು ಮಾಡುತ್ತಿದೆ. ಹಾಗೇ ರಫೆಲ್ ನಡಾಲ್ ಕೂಡ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಹೆಚ್ಚು ಯಶ ಸಾಧಿಸಿದ್ದಾರೆ. ಹೀಗಾಗಿ ಜಾಕೊವಿಕ್ ಟೆನಿಸ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆಯುವ ಸಾಧ್ಯತೆಗಳು ದಟ್ಟವಾಗಿವೆ.
ಇನ್ನೊಂದು ಅಚ್ಚರಿಯಂದ್ರೆ, ರೋಜರ್ ಫೆಡರರ್ 16 ಗ್ರ್ಯಾಂಡ್ ಸ್ಲ್ಯಾಮ್ ಮತ್ತು ರಫೆಲ್ ನಡಾಲ್ 9 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಾಗ ನೊವಾಕ್ ಜಾಕೊವಿಕ್ ಗೆದ್ದಿದ್ದು ಕೇವಲ 2 ಮಾತ್ರ. 2008ರ ಆಸ್ಟ್ರೇಲಿಯನ್ ಓಪನ್ ಜಾಕೊವಿಕ್ ಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್. ಹಾಗೇ 2011ರ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ 2011ರ ವಿಂಬಲ್ಡನ್ ಮತ್ತು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಆ ನಂತರ ಜಾಕೊವಿಕ್ ಅವರು ಫೆಡರರ್ ಮತ್ತು ನಡಾಲ್ ಗೆ ದಿಟ್ಟ ಹೋರಾಟವನ್ನು ನೀಡುತ್ತಾ ಕೇವಲ 10 ವರ್ಷಗಳಲ್ಲಿ ಅವರ ಸಾಲಿನಲ್ಲಿ ಸೇರಿಕೊಂಡಿದ್ದಾರೆ.
ಒಟ್ಟಿನಲ್ಲಿ ಜಾಕೊವಿಕ್ ನಂಬರ್ ವನ್ ಸ್ಥಾನವನ್ನು 329 ವಾರಗಳಿಂದ ಅಲಂಕರಿಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡು ದಾಖಲೆಗಳ ಒಡೆಯನಾಗುವುದು ಖಚಿತ. ಆದ್ರೆ ನೆನಪಿರಲಿ.. ಹಿಂದೆ ಫೆಡರರ್ ಮತ್ತು ನಡಾಲ್ ಕೂಡ ಇರುತ್ತಾರೆ ಎಂಬುದು. ಆದ್ರೆ ಅದು ಎಷ್ಟು ದಿನ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ.