ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಖ್ಯಮಂತ್ರಿಗಳು ಮಜಾದಲ್ಲಿದ್ದರೆ, ಉಪಮುಖ್ಯಮಂತ್ರಿಗಳು ಅಧಿಕಾರದ ಆಟದಲ್ಲಿ ಮುಳುಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. ಬೆಂಗಳೂರಿನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ, “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಯಾವುದೇ ಘಟನೆಯ ಬಗ್ಗೆ ಕೇಳಿದರೂ, ‘ಗೊತ್ತಿಲ್ಲ, ವರದಿ ತರಿಸಿಕೊಂಡು ಮಾತನಾಡುತ್ತೇನೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಇಂತಹವರಿಂದ ರಾಜ್ಯದ ಜನತೆ ಇನ್ನೇನು ನಿರೀಕ್ಷಿಸಲು ಸಾಧ್ಯ?” ಎಂದು ಪ್ರಶ್ನಿಸಿದರು.
ಡಿಕೆಶಿ ಹರಕೆಯ ಕುರಿ, ಸಿದ್ದರಾಮಯ್ಯ ಕುತಂತ್ರ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಟೆಂಪಲ್ ರನ್’ ಮತ್ತು ಹರಕೆಗಳ ಬಗ್ಗೆ ವ್ಯಂಗ್ಯವಾಡಿದ ಅಶೋಕ್, “ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದು ಖಚಿತ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೇ ಸಾಕ್ಷಿ. ಜಾರಕಿಹೊಳಿ ಮುಂದಿನ ಸಿಎಂ ಆಗುತ್ತಾರೆ ಎಂದು ಅವರು ಹೇಳಿರುವುದರ ಹಿಂದೆ ದೊಡ್ಡ ರಾಜಕೀಯ ಚರ್ಚೆಯೇ ನಡೆದಿದೆ. ಇದನ್ನೆಲ್ಲಾ ಅರಿತಿರುವ ಡಿಕೆಶಿ ಅವರು ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ” ಎಂದರು.
“ಹಾಸನಾಂಬೆ ದರ್ಶನದ ವೇಳೆ ಡಿಕೆಶಿ ಮೇಲೆ ಎರಡು ಹೂವು ಬಿದ್ದಿವೆ. ಇದರ ಅರ್ಥ ಸ್ಪಷ್ಟ. ಜಾತ್ರೆಯಲ್ಲಿ ಕುರಿಗೆ ಮಾಲೆ ಹಾಕಿ, ಮೆರವಣಿಗೆ ಮಾಡಿ ನಂತರ ಅದನ್ನು ಬಲಿ ಕೊಡುತ್ತಾರೆ. ಅದೇ ರೀತಿ, ಸಿದ್ದರಾಮಯ್ಯನವರು ಡಿಕೆಶಿ ಅವರನ್ನು ‘ಹರಕೆಯ ಕುರಿ’ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಇದು ಕೇವಲ ಟ್ರೈಲರ್ ಅಷ್ಟೇ, ಸಿದ್ದರಾಮಯ್ಯನವರ ಅಸಲಿ ಪಿಕ್ಚರ್ ಇನ್ನೂ ಬಾಕಿ ಇದೆ” ಎಂದು ಭವಿಷ್ಯ ನುಡಿದರು.
ಆರ್‌ಎಸ್‌ಎಸ್ ವಿಚಾರ ಜನರ ದಿಕ್ಕು ತಪ್ಪಿಸಲು
ರಾಜ್ಯದಲ್ಲಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, “ತಮ್ಮ ಕುರ್ಚಿ ಅಲುಗಾಡುತ್ತಿರುವುದನ್ನು ಅರಿತ ಮುಖ್ಯಮಂತ್ರಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್‌ಎಸ್‌ಎಸ್ ಸಂಘಟನೆಯನ್ನು ಗುರಿಯಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಈ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್‌ನವರು ಆರ್‌ಎಸ್‌ಎಸ್ ನೋಂದಣಿ ಎಂಬ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂವಿಧಾನದ ಯಾವ ಕಾನೂನಿನಲ್ಲಿ ಸಂಘಟನೆಗಳ ನೋಂದಣಿ ಕಡ್ಡಾಯ ಎಂದು ಹೇಳಿದೆ ಎಂಬುದನ್ನು ಮೊದಲು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಲಿ. ಯಾರು ಬೇಕಾದರೂ ಸಂಘಟನೆ ಕಟ್ಟಬಹುದು. ಇನ್ನು ಸಂಘದ ಹಣಕಾಸಿನ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ, ಮೊದಲು ತಮ್ಮ ಪಕ್ಷಕ್ಕೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ಬಹಿರಂಗಪಡಿಸಲಿ” ಎಂದು ತಿರುಗೇಟು ನೀಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದ ಅಶೋಕ್, “ನಾವು ಹಾಲು ಜೇನಿನಂತೆ ಅನ್ಯೋನ್ಯವಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮುಂಬರುವ ಚುನಾವಣೆಗಳಲ್ಲಿ ಸಮನ್ವಯ ಸಾಧಿಸುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿದ್ದು, ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ” ಎಂದು ಹೇಳಿದರು.
ಇದೇ ವೇಳೆ, ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪ್ರತಿಯಾಗಿ ಭೀಮ್ ಆರ್ಮಿ ಮೆರವಣಿಗೆಗೆ ಅನುಮತಿ ಕೋರಿರುವ ಬಗ್ಗೆ ಪ್ರತಿಕ್ರಿಯಿಸಿ, “ಯಾರು ಬೇಕಾದರೂ ಮೆರವಣಿಗೆ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ದಲಿತರು, ಲಿಂಗಾಯತರು, ಒಕ್ಕಲಿಗರು ಯಾರೇ ಕಾರ್ಯಕ್ರಮ ನಡೆಸಿದರೂ ನಾವು ಸ್ವಾಗತಿಸುತ್ತೇವೆ” ಎಂದರು.








