ಕರ್ನಾಟಕ ಸರ್ಕಾರ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ 2024ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಮುಂದೆ ಇನ್ನೂ ಎರಡು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ.
ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಸಿ. ಎಸ್. ಷಡಾಕ್ಷರಿ ಅವರು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಬೇಡಿಕೆಯನ್ನು ಮತ್ತು 2026ಕ್ಕೆ ಕೇಂದ್ರ ಸರಿಸಮಾನವಾದ ವೇತನ ಪಡೆಯುವುದು ತಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿ. ಎಸ್. ಷಡಾಕ್ಷರಿ ಅವರು, “ಆರೋಗ್ಯ ಸಂಜೀವಿನಿ ಯೋಜನೆ ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಜಾರಿಗೆ ಬರಲಿದೆ. ನೌಕರರ ಒಳಿತಿಗಾಗಿ ಕಳೆದ ಅವಧಿಯ 25ಕ್ಕೂ ಹೆಚ್ಚು ಸರ್ಕಾರಿ ಆದೇಶಗಳನ್ನು ಮಾಡಿಸಿದ್ದೇವೆ. ಯೋಜನೆಗಳ ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ” ಎಂದು ಹೇಳಿದರು.